ತುಂಗಾಭದ್ರಾ ಜಲಾಶಯಕ್ಕೆ ಒಳಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಬಿಡುಗಡೆ
ಕೊಪ್ಪಳ: ತುಂಗಾಭದ್ರಾ ಜಲಾಶಯಕ್ಕೆ ಒಳಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನೀರು ಬಿಟ್ಟಿರುವುದರಿಂದ ಗಂಗಾವತಿ, ಕಾರಟಗಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ಭಾಗದ ಭತ್ತ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ರೈತರು ಭತ್ತಕ್ಕಾಗಿ ಕಾಲುವೆ ನೀರನ್ನೇ ನೆಚ್ಚಿಕೊಂಡಿದ್ದಾರೆ.
ಎಡದಂಡೆ ಮುಖ್ಯ ಕಾಲುವೆಗೆ ನಿತ್ಯ 4,100 ಕ್ಯುಸೆಕ್‌ನಂತೆ ನೀರು ಹರಿಸಲಾಗಿದೆ.
ತುಂಗಭದ್ರಾ ಜಲಾಶಯವು ಒಟ್ಟು 105.788 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಶುಕ್ರವಾರ ಬೆಳಿಗ್ಗೆ ವೇಳೆಗೆ 55.196 ಟಿಎಂಸಿ ಅಡಿ ಸಂಗ್ರಹವಿದೆ. ಒಳ ಹರಿವು 1,065,79 ಲಕ್ಷ ಕ್ಯುಸೆಕ್ ಇದೆ.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಜಶೇಖರ ಹಿಟ್ನಾಳ ದೇವರ ಆಶೀರ್ವಾದದಿಂದ ಉತ್ತಮ ಮಳೆಯಾಗಿದೆ. ಆದ್ದರಿಂದ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ನೀರು ಹರಿಸಲು ನಿರ್ಧರಿಸಲಾಯಿತು. ಮುಂದಿನ ಕೆಲ ದಿನಗಳಲ್ಲಿ ಸಭೆ ನಡೆಸಲಾಗುವುದು ಎಂದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಐದೂ ವರ್ಷ ಭ್ರಷ್ಟಾಚಾರ ಬಿಟ್ಟು ಬೇರೆ ಎನೂ ಮಾಡಿಲ್ಲ. ಈಗಲೂ ಅದೇ ಜಪ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ರಾಜ್ಯ ಬಿಜೆಪಿ ನಾಯಕರು ನಮ್ಮ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಯಾರು ಎನೇ ಮಾಡಿದರೂ ಸರ್ಕಾರ ಸುರಕ್ಷಿತ ಹಾಗೂ ಸುಭದ್ರವಾಗಿದೆ ಎಂದರು.
ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.