ADVERTISEMENT

‘ದೇಶದ ನೆಮ್ಮದಿಗಾಗಿ ಸರ್ಕಾರ ನಿರ್ಧಾರ’

ಪಿಎಫ್‌ಐ ನಿಷೇಧದ ಹಿಂದೆ ರಾಜಕಾರಣವಿಲ್ಲ: ಸಂಸದ ಕರಡಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 15:50 IST
Last Updated 28 ಸೆಪ್ಟೆಂಬರ್ 2022, 15:50 IST

ಕೊಪ್ಪಳ: ‘ದೇಶದ ಭದ್ರತೆ ಹಾಗೂ ನೆಮ್ಮದಿ ಕಾರಣಕ್ಕಾಗಿ ಯೋಚನೆ ಮಾಡಿಯೇ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆ ನಿಷೇಧ ಮಾಡಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಹಲವಾರು ಕಾರಣಗಳ ಹಿನ್ನೆಲೆಯಲ್ಲಿ ನಿಷೇಧದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅನಿವಾರ್ಯವೂ ಆಗಿತ್ತು’ ಎಂದರು.

ಪಿಎಫ್‌ಐ ನಿಷೇಧದ ಹಿಂದೆ ರಾಜಕಾರಣವಿದೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ‘ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಿದ್ದರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ್ಲ. ಆರ್‌ಎಸ್‌ಎಸ್‌ನಿಂದ ಯಾವ ದೇಶದ್ರೋಹವೂ ಆಗಿಲ್ಲ. ಆರೋಪ ಮಾಡುವುದಷ್ಟೇ ಅಲ್ಲ; ಸೂಕ್ತ ದಾಖಲೆಗಳನ್ನೂ ಕೊಡಬೇಕು. ರಾಜಕೀಯ ಕಾರಣಕ್ಕಾಗಿ ಏನು ಬೇಕಾದರೂ ಹೇಳಿಕೆ ಕೊಡುವುದು ಸರಿಯಲ್ಲ. ಓಲೈಕೆ ರಾಜಕಾರಣ ಮಾಡಬಾರದು’ ಎಂದರು.

ADVERTISEMENT

ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿ ‘ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಈ ಸಂಘಟನೆಯಲ್ಲಿ 15 ಸಾವಿರ ಯವಕರು ತೊಡಗಿದ್ದಾರೆ. ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ ಮಾಡಿದ್ದರು’ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ನಿಷೇಧ ಮಾಡಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ ‘ಒಮ್ಮೆ ಬಿಜೆಪಿ, ಇನ್ನೊಮ್ಮೆ ಕಾಂಗ್ರೆಸ್‌ ಗೆಲ್ಲಬಹುದು. ಪಿಎಫ್‌ಐ ಪರ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್‌ ಆ ಜನಾಂಗದ ಮತಗಳನ್ನು ಗಳಿಸುವ ಪಿತೂರಿ ಮಾಡುತ್ತಿದೆ. ಭಾರತದ ಜನ ನೆಮ್ಮದಿಯಾಗಿ ಬದುಕಬಾರದೇ’ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್‌

ಕೊಪ್ಪಳ: ಜಿಲ್ಲೆಯಲ್ಲಿ ಒಂದು ವಾರದಿಂದ ವಿವಿಧ ಸಂಘಟನೆಗಳ ಮುಖಂಡರ ವಶ, ವಿಚಾರಣೆ ನಡೆಯುತ್ತಲೇ ಇರುವುದರಿಂದ ಪೊಲೀಸರು ಪ್ರಮುಖ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ಬುಧವಾರ ಬೆಳಿಗ್ಗೆ ಪಿಎಫ್‌ಐ ನಿಷೇಧ ಸುದ್ದಿ ಹೊರಬೀಳುತ್ತಿದ್ದಂತೆ ಜಿಲ್ಲಾ ಕೇಂದ್ರವೂ ಸೇರಿದಂತೆ ವಿವಿಧೆಡೆ ಕಣ್ಗಾವಲು ಇರಿಸಿದ್ದರು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚೆರಿಕಾ ಕ್ರಮವಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.