ADVERTISEMENT

ನಿವೇಶನಗಳ ಅಭಿವೃದ್ಧಿಗೆ ಅನುದಾನ: ಸಚಿವ ಜಮೀರ್ ಭರವಸೆ

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಜಮೀರ್ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 14:07 IST
Last Updated 26 ಜನವರಿ 2025, 14:07 IST
ಕೊಪ್ಪಳದಲ್ಲಿ ಭಾನುವಾರ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸಿದರು
ಕೊಪ್ಪಳದಲ್ಲಿ ಭಾನುವಾರ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸಿದರು   

ಕೊಪ್ಪಳ: ‘ಅನೇಕರಿಗೆ ನಿವೇಶನಗಳನ್ನು ವಿತರಿಸಲಾಗಿದ್ದು, ಇದಷ್ಟೇ ಆದರೆ ಸಾಲದು. ಸ್ಥಳೀಯ ಜನಪ್ರತಿನಿಧಿಗಳು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಲೇಔಟ್‌ ಅಭಿವೃದ್ಧಿಗೆ ಅನುದಾನ ಕೊಡಲಿ. ನನ್ನ ಇಲಾಖೆಯಿಂದಲೂ ನೆರವು ಕೊಡುವೆ’ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

ಇಲ್ಲಿನ ಸಾಹಿತ್ಯ ಭವನದಲ್ಲಿ ನಗರಸಭೆ ವತಿಯಿಂದ ಭಾನುವಾರ ಪೌರಸೇವಾ ಕಾರ್ಮಿಕರು ಹಾಗೂ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿವೇಶನಗಳನ್ನು ನೀಡಿದ ಜಾಗದಲ್ಲಿ ಕುಡಿಯುವ ನೀರು, ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು. ಇದಕ್ಕೆ ಅನುದಾನ ಕೊಡುವೆ’ ಎಂದರು.

‘ಜನಪರವಾಗಿ ಒಳ್ಳೆಯ ಕೆಲಸ ಮಾಡಿದರೆ ಜನ ಎಂದೂ ಕೈ ಬಿಡುವುದಿಲ್ಲ. ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಬಡವರಿಗೂ ನಿವೇಶನ ನೀಡಲಾಗುತ್ತಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ 36,780 ಮನೆಗಳನ್ನು ಬಡವರಿಗೆ ಕೊಡಲಾಗಿದೆ’ ಎಂದರು.

ADVERTISEMENT
ಜಮೀರ್ ಅಹ್ಮದ್ ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇದೆ. ಹೆಚ್ಚು ನಿವೇಶನಗಳನ್ನು ಕೊಡುವ ಯೋಜನೆ ಹಾಕಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗೆ ವಾರ್ಷಿಕ ₹54 ಸಾವಿರ ಕೋಟಿ ಖರ್ಚಾಗುತ್ತಿದೆ.
ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ, ‘ಜಮೀರ್‌ ಅವರು ವಸತಿ ಸಚಿವರಾದ ಮೇಲೆ ಹಲವಾರು ಬದಲಾವಣೆಗಳನ್ನು ಈ ಇಲಾಖೆಯಲ್ಲಿ ತಂದಿದ್ದಾರೆ’ ಎಂದು ಹೇಳಿದರು.

ಸಂಸದ ಕೆ.ರಾಜಶೇಖರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ ಭಾಷಾ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಗುಪ್ತಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಭಗತ್ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಶಾ ಪಲ್ಟನ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.