ADVERTISEMENT

ಕುಷ್ಟಗಿ: ವೃದ್ಧ ದಂಪತಿ ಬದುಕಿಗೆ ಸಿಹಿಯಾದ ದ್ರಾಕ್ಷಿ ಬೆಳೆ

ಹಿರೇಮನ್ನಾಪುರ: ಮಾಣಿಕ್‌ ಚಮನ್‌ ದ್ರಾಕ್ಷಿ ಚಮತ್ಕಾರ

ನಾರಾಯಣರಾವ ಕುಲಕರ್ಣಿ
Published 26 ಫೆಬ್ರುವರಿ 2025, 5:56 IST
Last Updated 26 ಫೆಬ್ರುವರಿ 2025, 5:56 IST
ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದ ರೈತ ಶಿವನಗೌಡ ಮಾಲೀಪಾಟೀಲ ಅವರ ತೋಟದಲ್ಲಿನ ದ್ರಾಕ್ಷಿ ಬೆಳೆ
ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದ ರೈತ ಶಿವನಗೌಡ ಮಾಲೀಪಾಟೀಲ ಅವರ ತೋಟದಲ್ಲಿನ ದ್ರಾಕ್ಷಿ ಬೆಳೆ   

ಕುಷ್ಟಗಿ: ಕೆಲಸ ಯಾವುದೇ ಇರಲಿ ಅದನ್ನು ಮನ ಒಪ್ಪುವಂತೆ ನಿರ್ವಹಿಸಿದರೆ ಉತ್ತಮ ಫಲ ದಕ್ಕುತ್ತದೆ ಎಂಬುದಕ್ಕೆ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದ ಶಿವನಗೌಡ ಮಾಲೀಪಾಟೀಲ, ಶರಣಮ್ಮ ರೈತ ದಂಪತಿ ಮಾದರಿಯಾಗಿದ್ದಾರೆ. ಅವರ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಮಾಡಿರುವ 'ಚಮತ್ಕಾರ' ಎಲ್ಲರ ಗಮನ ಸೆಳೆಯುತ್ತಿದೆ.

ಗ್ರಾಮದಿಂದ ಅನತಿ ದೂರದಲ್ಲಿ ಜಮೀನು ಹೊಂದಿರುವ ಈ ರೈತ ತಮ್ಮ ಕೇವಲ ಒಂದು ಎಕರೆಯಲ್ಲಿ ಕೆಲ ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದು, ಉತ್ತಮ ಫಸಲು ತೆಗೆಯುತ್ತಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ 'ಇದು ಐದನೇ ವರ್ಷದ ಬೆಳಿ ಐತ್ರಿ ಒಂದು ಸಲವೂ ಫೇಲ್‌ ಆಗಿಲ್ರಿ. ಮಾಡಿದ ಕೆಲಸಕ್ಕ ಫಲ ಸಿಕ್ಕೇ ಸಿಕ್ಕೈತ್ರಿ' ಎನ್ನುವ ಮೂಲಕ ಖುಷಿ ಹಂಚಿಕೊಂಡರು.

ಉತ್ತಮ ರೀತಿಯಲ್ಲಿ ತೋಟದ ನಿರ್ವಹಣೆ ಮಾಡಿದ್ದು, ದ್ರಾಕ್ಷಿ ಹಣ್ಣಿನ ಗೊಂಚಲುಗಳು ಬಳ್ಳಿಗೆ ಕಟ್ಟಿರುವ ತಂತಿಗೆ ಭಾರವಾಗುವಂತೆ ಇಳಿಬಿದ್ದಿದ್ದು ಬಾಯಲ್ಲಿ ನೀರೂರಿಸುತ್ತಿವೆ. ಈ ಬಾರಿ ಗುಣಮಟ್ಟದ ಇಳುವರಿಯ ಜತೆಗೆ ಮಾರುಕಟ್ಟೆಯಲ್ಲಿ ಸದ್ಯಕ್ಕಂತೂ (ಕೆ.ಜಿಗೆ ₹ 40-45) ಉತ್ತಮ ದರವೂ ಇರುವುದು ಈ ರೈತ ಕುಟುಂಬದ ಖುಷಿಗೆ ಕಾರಣವಾಗಿದೆ. ವಾರದ ಅವಧಿಯಲ್ಲಿ ದ್ರಾಕ್ಷಿ ಕಟಾವು ಆರಂಭಗೊಳ್ಳಲಿದ್ದು ಈಗಾಗಲೇ ವ್ಯಾಪಾರಿಗಳು ಸಂಪರ್ಕಿಸುತ್ತಿದ್ದಾರೆ.

ADVERTISEMENT

ನಿರ್ವಹಣೆ ಹೀಗಿದೆ: ಹೊಲವನ್ನು ಸ್ವಚ್ಛಗೊಳಿಸುವದರ ಜತೆಗೆ ಕೊಟ್ಟಿಗೆ ಗೊಬ್ಬರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕ ರೀತಿಯಲ್ಲಿ ರಾಸಾಯನಿಕ ಗೊಬ್ಬರ, ಕಾಲಕಾಲಕ್ಕೆ ಯಾವುದಾದರೂ ರೋಗ ಬಾಧೆಗೆ ಒಳಗಾದರೆ ಅದನ್ನು ಸ್ವತಃ ಪತ್ತೆ ಮಾಡಿ ಔಷಧ ಸಿಂಪಡಣೆ ಮಾಡುವ ಮೂಲಕ ಶಿವನಗೌಡ ಉತ್ತಮ ರೀತಿಯಲ್ಲಿ ಕಾಳಜಿಪೂರ್ವಕವಾಗಿ ನಿರ್ವಹಿಸುತ್ತಿದ್ದಾರೆ. ಈ ಬಾರಿ ಅತ್ಯುತ್ತಮ ಗೊನೆಗಳು ಬಂದಿವೆ ಎಂದು 'ಪ್ರಜಾವಾಣಿ' ಬಳಿ ಸಂತಸ ಹಂಚಿಕೊಂಡರು. ಅಷ್ಟೇ ಅಲ್ಲ ಸ್ವಲ್ಪ ನಿಷ್ಕಾಳಜಿ ಮಾಡಿದರೂ ಬೆಳೆ ಹಾಳಾಗುವ ಎಲ್ಲ ಸಾಧ್ಯತೆಗಳಿರುತ್ತವೆ ಎಂಬ ಎಚ್ಚರಿಕೆ ಮಾತು ಹೇಳಿದರು.

ದ್ರಾಕ್ಷಿ ಬೇಸಾಯ, ನಿರ್ವಹಣೆ ಮತ್ತು ಮಾರಾಟದಲ್ಲಿ ಸಾಕಷ್ಟು ಅನುಭವ ಹೊಂದಿರುವ ಶಿವನಗೌಡ ಅವರ ಹಿರಿಯರು ಮೂರು ದಶಕಗಳ ಹಿಂದೆಯೇ ದ್ರಾಕ್ಷಿ ಬೆಳೆಯುತ್ತಿದ್ದರು. ತಾವೂ ದ್ರಾಕ್ಷಿ ಬೆಳೆಯಲ್ಲಿಯೇ ಆಸಕ್ತಿ ಹೊಂದಿದ್ದಾರೆ. ಉತ್ತಮ ನಿರ್ವಹಣೆಯಿಂದಾಗಿ ಈ ಬಾರಿ ಕನಿಷ್ಠ 21 ಟನ್ನಿಗೂ ಅಧಿಕ ಇಳುವರಿ ನಿರೀಕ್ಷೆ ಹೊಂದಿದ್ದಾರೆ.

ತಳಿ ಆಯ್ಕೆ: ಈ ಭಾಗದಲ್ಲಿ ಕಾಜು ಸೊನಾಕಾ, ಥಾಮ್ಸನ್ಸ್ ತಳಿಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದು, ವಿಶಿಷ್ಟ ಎನ್ನಲಾಗಿರುವ ಮಾಣಿಕ್‌ ಚಮನ್‌ ತಳಿ ಗೌಡರ ತೋಟದಲ್ಲಿದೆ. ಇತರೆ ದ್ರಾಕ್ಷಿಗಿಂತ ಈ ತಳಿಯ ರುಚಿ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಇದೆ. ಕೊಪ್ಪಳ, ಸಿಂಧನೂರು, ಕುಷ್ಟಗಿಯ ಹಣ್ಣಿನ ವ್ಯಾಪಾರಿಗಳು ತೋಟಕ್ಕೆ ಬಂದು ಹಣ್ಣು ಖರೀದಿಸುತ್ತಾರೆ.

ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರದ ರೈತ ಶಿವನಗೌಡ ಮಾಲೀಪಾಟೀಲರ ತೋಟದಲ್ಲಿ ಬೆಳೆದ ದ್ರಾಕ್ಷಿ ಬೆಳೆ
ಕಳೆದ ವರ್ಷದಂತೆ ಈ ಬಾರಿಯೂ ನಮ್ಮ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು ಉತ್ತಮ ಫಸಲು ಕೈಸೇರುವ ನಿರೀಕ್ಷೆ ಇದೆ.
ಶಿವನಗೌಡ ಮಾಲೀಪಾಟೀಲ ದ್ರಾಕ್ಷಿ ಬೆಳೆಗಾರ
ದ್ರಾಕ್ಷಿ ಮೇಳ ನಡೆಸುವುದೂ ಸೇರಿದಂತೆ ಅಗತ್ಯ ಸಂದರ್ಭದಲ್ಲಿ ರೈತರಿಗೆ ತಾಂತ್ರಿಕ ಮತ್ತು ಮಾರಾಟದ ಮಾಹಿತಿ ಒದಗಿಸಲಾಗುತ್ತಿದೆ.
ಮಂಜುನಾಥ ಲಿಂಗಣ್ಣವರ ತೋಟಗಾರಿಕೆ ಸಹಾಯಕ ನಿರ್ದೇಶಕ

ಕಾಯಕದಲ್ಲಿ ಬತ್ತದ ಉತ್ಸಾಹ

ಇಳಿವಯಸ್ಸಿನಲ್ಲೂ ಶಿವನಗೌಡ ಮತ್ತು ಶರಣಮ್ಮ ದಂಪತಿ ಅವರದು ದ್ರಾಕ್ಷಿ ಬೆಳೆಯುವಲ್ಲಿ ಕುಗ್ಗದ ಉತ್ಸಾಹ ಯುವಕರನ್ನು ನಾಚಿಸುವಂತಿದೆ. ಅಗತ್ಯವಿದ್ದಾಗ ಮಾತ್ರ ಕೂಲಿಕೆಲಸಗಾರರು ಬರುತ್ತಾರೆ. ಉಳಿದ ದಿನ ತೋಟದ ನಿರ್ವಹಣೆ ಇಬ್ಬರದ್ದೇ. ಓದಲು ಬರೆಯಲು ಬಾರದಿದ್ದರೂ ಶಿವನಗೌಡ ದ್ರಾಕ್ಷಿ ಬೆಳೆಯುವಲ್ಲಿ ಮಾತ್ರ ಸಾಕಷ್ಟು ಪರಿಣತಿ ಹೊಂದಿರುವುದು ವಿಶೇಷ. ಅಷ್ಟೇ ಅಲ್ಲ ಅವರು ಊರಿನ ಮನೆಯಲ್ಲಿರುವುದು ಆರು ತಿಂಗಳು ಮಾತ್ರ. ಉಳಿದ ಆರು ತಿಂಗಳು ತೋಟ ಬಿಟ್ಟು ಕದಲುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.