ಅಳವಂಡಿ: ಜಿಲ್ಲೆಯ ಪ್ರಸಿದ್ಧ ಮಠಗಳ ಪೈಕಿ ಒಂದಾಗಿರುವ ಇಲ್ಲಿನ ಸಿದ್ದೇಶ್ವರ ಮಠ ತನ್ನದೇ ಆದ ಶ್ರೇಷ್ಠ ಪರಂಪರೆ, ಇತಿಹಾಸ ಹೊಂದಿದೆ.
ವೀರಶೈವ ಧರ್ಮಗಳಲ್ಲಿ ಬರುವ ಪಂಚ ಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಮಠವಾಗಿ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಸಂಸ್ಥಾನ ಮಠ 8ನೇ ಶತಮಾನದಲ್ಲಿ ಸ್ಥಾಪನೆಗೊಂಡು ಭಕ್ತರ ಭಾಗ್ಯನಿಧಿಯಾಗಿದೆ.
ಅಳವಂಡಿಯು ಅಧ್ಯಾತ್ಮ, ಕೃಷಿ, ಹೋರಾಟದ ಮೂಲಕ ತನ್ನದೇ ಭವ್ಯ ಪರಂಪರೆ ಹೊಂದಿದೆ. ಗ್ರಾಮದ ಆರಾಧ್ಯ ದೈವ ಸಿದ್ದೇಶ್ವರ ದೇಗುಲವನ್ನು ಕಲ್ಯಾಣ ಚಾಲುಕ್ಯರು ನಿರ್ಮಿಸಿದವರು ಎಂಬ ಪ್ರತೀತಿ ಇದೆ.
ಹಿಂದೆ ರಾಜ ಮಹಾರಾಜರು, ಸುತ್ತಲಿನ ಗ್ರಾಮಗಳ ದೇಸಾಯಿ, ಗೌಡರು ಶ್ರೀಮರುಳಸಿದ್ದರಿಗೆ ಕರ್ಪೂರ ಅರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ. ಶರಣರಾದ ಗೋಣಿ ಸ್ವಾಮಿ ಹಾಗೂ ಮೈಲಾರ ಲಿಂಗಪ್ಪನವರು ಮರುಳಸಿದ್ದರ ಸಮಕಾಲೀನರಾಗಿದ್ದರು. ಇಬ್ಬರು ಶರಣರು ಮರುಳು ಸಿದ್ದೇಶ್ವರರ ದರ್ಶನ ಪಡೆದು ತಮಗಾಗಿ ಒಂದು ಜಿಂಕೆ ಚರ್ಮದಷ್ಟು ಜಾಗವನ್ನು ಕೇಳಿ ಅದನ್ನು ದಾನಮಾಡಿ ಶ್ರೀಗಳಿಂದ ಆರ್ಶೀವಾದ ಪಡೆದರು.
ಮಠದ ಜಾಗದಲ್ಲಿ ಸಿದ್ದೇಶ್ವರ ದೇವಸ್ಥಾನದ ಹಿಂಭಾಗದಲ್ಲಿ 2 ಗೋಣಿ ಬಸವೇಶ್ವರರ ದೇವಸ್ಥಾನಗಳನ್ನು ನಿರ್ಮಿಸಿ ಗುರುಗಳ ಜತೆ ಸದಾ ಕಾರ್ಯಾಚರಣೆಯಲ್ಲಿರುವುದು ಇಂದಿಗೂ ಪ್ರತೀತಿ ಇದೆ.
ಕಾಳಿಕಾ ಉಜ್ಜಯಿನಿಯಿಂದ ದಯಮಾಡಿಸಿದ ಜಗದ್ಗುರು ಮರುಳಾರಾಧ್ಯರು ಈಗಿನ ಅಳವಂಡಿಯ ನೈಋತ್ಯ ದಿಕ್ಕಿನಲ್ಲಿರುವ ಸುಕ್ಷೇತ್ರದಲ್ಲಿ ಇಪ್ಪತ್ತೊಂದು ವರ್ಷಗಳ ಕಾಲ ಅನುಷ್ಠಾನ ಮಾಡಿ ಸಿದ್ದೇಶ್ವರ ಮಹಾಲಿಂಗ ಸ್ಥಾಪನೆ ಮಾಡಿದ್ದಾರೆ. ಬಳಿಕ ಈ ಪರಂಪರೆಯಲ್ಲಿ ಅನೇಕ ಶಿವಾಚಾರ್ಯರು ಧರ್ಮ ಜಾಗೃತಿ ಮೂಡಿಸಿದ್ದಾರೆ. ಶಿಂಗಟಾಲೂರು ವೀರಭದ್ರಸ್ವಾಮಿಯನ್ನು ಪ್ರತಿಷ್ಠಾಪಿಸಿದ ಕೀರ್ತಿ ಹಿಂದಿನ ಮಠದ ಗುರುಗಳಿಗೆ ಸಲ್ಲುತ್ತದೆ. ಮಠದಲ್ಲಿ ಮಹಾಯೋಗಿ ತಪೋನಿಧಿ ರಂಭಾಪುರಿ ವೀರಗಂಗಾಧರ ಶಿವಾಚಾರ್ಯ ಶಿವಯೋಗಿ ಅನುಷ್ಠಾನ ಮಾಡಿ ಮಳೆ ಅನುಗ್ರಹಿಸಿದ್ದನ್ನು ಜನ ಇಂದಿಗೂ ಮರೆತಿಲ್ಲ.
ಕೂಲಹಳ್ಳಿ ಗೋಣಿಬಸವೇಶ್ವರನಿಗೆ ಲಿಂಗದೀಕ್ಷೆ ಕೊಟ್ಟು ಆಶೀರ್ವದಿಸಿದ ಕೀರ್ತಿಯು ಲಿಂ.ಸಿದ್ದೇಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ. ಮರುಳಸಿದ್ದರು ಧರ್ಮ ಪ್ರಸಾರದ ಉದ್ದೇಶದಿಂದ ಸಂಚರಿಸುತ್ತಾ ಅಳವಂಡಿ ಗ್ರಾಮಕ್ಕೆ ಬಂದು ಗ್ರಾಮವನ್ನು ಕಟ್ಟಿ 19 ವರ್ಷಗಳ ಕಾಲ ತಪಸ್ಸು ಮಾಡಿದರು. ಶ್ರೀಮಠವು ಅನೇಕ ಶಾಖಾ ಮಠಗಳನ್ನು ಹೊಂದಿದೆ.
ಕೊಪ್ಪಳ ಮಹಾನಗರದಲ್ಲಿ ಜಗದ್ಗುರು ಪಂಚಾಚಾರ್ಯರ ಐತಿಹಾಸಿಕ ಅಡ್ಡಪಲಕ್ಕಿ ಮಹೋತ್ಸವವನ್ನು ಮಠದಿಂದ ನೇರವೇರಿಸಿ ಮಾದರಿಯಾಗಿದ್ದಾರೆ.
ಹೊರ ರಾಜ್ಯದಲ್ಲಿ ಭಕ್ತರು: ತಪಸ್ವಿಗಳು, ಪವಾಡ ಪುರುಷರು, ಇಷ್ಟಲಿಂಗ, ಪೂಜಾನುಷ್ಠಾನ ಮೂರ್ತಿಗಳು ಶ್ರೀಮಠದ ಗದ್ದುಗೆ ಅಲಂಕರಿಸಿದ್ದಾರೆ. ಲಿಂ.ಷ.ಬ್ರ.ಸಿದ್ದಲಿಂಗ ಮಹಾಸ್ವಾಮೀಜಿ ಅವರು ಸಿದ್ದೇಶ್ವರ ದೇವಸ್ಥಾನ, ಶಾಂತಮ್ಮ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನಗಳ ಅಭಿವೃದ್ಧಿ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ವೈದಿಕ, ಶಿಕ್ಷಣ ದಾಸೋಹ ಹಾಗೂ ಮಠದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಠದ ಭಕ್ತರು ರಾಜ್ಯ ಸೇರಿ ದೇಶ, ವಿದೇಶಗಳಲ್ಲೂ ಇದ್ದಾರೆ.
ಮಠದಲ್ಲಿ ಪ್ರತಿ ಅಮಾವಾಸ್ಯೆಯಂದು ವಿಶೇಷ ಪೂಜೆ, ಶಿವಾನುಭವ, ಯೋಗ ಶಿಕ್ಷಣ, ಪರಿಸರ ಹಾಗೂ ಆರೋಗ್ಯ ಜಾಗೃತಿ, ವೈದಿಕ ಸಂಸ್ಕಾರ ಶಿಬಿರ, ಶ್ರಾವಣ ಮಾಸದಲ್ಲಿ ಪುರಾಣ ಸೇರಿದಂತೆ ಅನೇಕ ಧಾರ್ಮಿಕ ಸಮಾರಂಭಗಳು ಜರುಗುತ್ತವೆ.
ಜಾತ್ರಾಮಹೋತ್ಸವ: ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ ಭಾನುವಾರ, ಸೋಮವಾರ ನಡೆಯಲಿದ್ದು ಗ್ರಾಮ ಸಿಂಗಾರಗೊಂಡಿದೆ.
ಪ್ರತಿ ಮನೆಗೂ ಬಣ್ಣ ಹಚ್ಚಲಾಗಿದೆ. ಗ್ರಾಮದ ಪ್ರಮುಖ ಬೀದಿ, ಸಿದ್ದೇಶ್ವರ ಮಠ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಗಳು ಕಂಗೊಳಿಸುತ್ತಿವೆ. ಜಾತ್ರೆ ಜ.30 ರಿಂದ ಆರಂಭವಾಗಿದ್ದು ಫೆ.10ರಂದು ಸಂಪನ್ನವಾಗಲಿದೆ.
ಸಿದ್ದೇಶ್ವರ ದೇವಸ್ಥಾನ, ಗೋಪುರ, ದ್ವಾರ ಬಾಗಿಲುಗಳನ್ನು ತೋರಣಗಳಿಂದ ಸಿಂಗರಿಸಲಾಗಿದ್ದು, ಮಹಾರಥೋತ್ಸವಕ್ಕೆ ತೇರು ಸಿಂಗರಿಸುವ ಕಾರ್ಯ ಭರದಿಂದ ಸಾಗಿದೆ. ಹಳ್ಳಿ ಸೊಗಡನ್ನು ಬಿಂಬಿಸುವ ಜಾತ್ರೆಗೆ ಗ್ರಾಮಸ್ಥರಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಸಜ್ಜಾಗಿದ್ದಾರೆ.
ಕಳೆದ ವಾರದಿಂದ ಅಳವಂಡಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಪ್ರಮುಖ ಬೀದಿ ಸೇರಿದಂತೆ ಪ್ರತಿ ವಾರ್ಡ್, ಜಾತ್ರೆಯ ಆವರಣದ ಸ್ವಚ್ಛ ಮಾಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಎರಡು ದಿನ ದಾಸೋಹ: ಜಾತ್ರೆಗೆ ಆಗಮಿಸುವ ಭಕ್ತರಿಗೆ ಎರಡು ದಿನಗಳ ಕಾಲ ನಿರಂತರವಾಗಿ ದಾಸೋಹ ನಡೆಯಲಿದೆ. ಭಕ್ತರು ದವಸ ಧಾನ್ಯ, ರೊಟ್ಟಿ, ಕಟ್ಟಿಗೆ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಮಠಕ್ಕೆ ಸಮರ್ಪಿಸುತ್ತಿದ್ದಾರೆ. ಶನಿವಾರ ಕೂಡ ದಾಸೋಹದ ಆವರಣವನ್ನು ಸಿದ್ಧತೆ ಮಾಡುವುದು ಕಂಡುಬಂತು.
ಅಳವಂಡಿಯ ಸಿದ್ದೇಶ್ವರ ಮಠದ ಈಗಿನ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಕ್ರಿಯಾಶೀಲತೆ ಮೂಲಕ ಮಠಕ್ಕೆ ಹೊಸ ಕಳೆ ತಂದಿದ್ದಾರೆ. ಉತ್ತಮ ಪ್ರವಚನಕಾರರು ಹಾಗೂ ಯೋಗಪಟುಗಳಾಗಿದ್ದಾರೆ. ಭಕ್ತರ ಮನದಲ್ಲಿ ಉಳಿದಿದ್ದಾರೆ.
ಆಧ್ಯಾತ್ಮದತ್ತ ಒಲವು ತೋರಿಸುತ್ತಾ ಸಾಧಕರ ನಿರ್ಮಾಣ ಕೇಂದ್ರ ಶಿವಯೋಗಿ ಮಂದಿರದಲ್ಲಿ ಅಷ್ಟಾಂಗ ಯೋಗ ಧ್ಯಾನ ಕೈಗೊಂಡಿದ್ದಾರೆ. ಜ್ಯೋತಿಷ್ಯ, ವೇದ, ಶಾಸ್ತ್ರಗಳ ಅಧ್ಯಯನ ಮಾಡಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಇಂದಿನ ಕಾರ್ಯಕ್ರಮಗಳು ಭಾನುವಾರ (ಫೆ.9) ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಸಿದ್ದೇಶ್ವರ ಮೂರ್ತಿಗೆ ರುದ್ರಾಭಿಷೇಕ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಧರ್ಮಸಭೆ ನಡೆಯಲಿವೆ. ಸಂಜೆ ಸಿದ್ದೇಶ್ವರ ಧ್ವಜ ಲೀಲಾವು ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ಹಾಗೂ ಸಿದ್ದೇಶ್ವರ ಮಹಾರಥೋತ್ಸವ ಜರುಗಲಿದೆ.
ಭೀಮವ್ವ ಶಿಳ್ಳಿಕ್ಯಾತರ್‌ಗೆ ಸನ್ಮಾನ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಶತಾಯುಷಿ ತೊಗಲು ಗೊಂಬೆಯ ಹಿರಿಯ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳಿಕ್ಯಾತರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.