ADVERTISEMENT

ಭೂ ಸವಕಳಿ ತಡೆಗೆ 'ಅಂತರ್ಜಲ ಚೇತನ'

'ಕ್ಲಾರ್ಟ್‌' ಆ್ಯಪ್‌ ಬಳಕೆ ಕುರಿತು ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 14:34 IST
Last Updated 18 ಜುಲೈ 2022, 14:34 IST
ಕುಷ್ಟಗಿಯಲ್ಲಿ ನಡೆದ 'ಕ್ಲಾರ್ಟ್‌' ಆ್ಯಪ್‌ ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ವಾಸುದೇವಮೂರ್ತಿ ಮಾತನಾಡಿದರು. ತಾ.ಪಂ. ಇಒ ಶಿವಪ್ಪ ಸುಬೇದಾರ ಇದ್ದರು
ಕುಷ್ಟಗಿಯಲ್ಲಿ ನಡೆದ 'ಕ್ಲಾರ್ಟ್‌' ಆ್ಯಪ್‌ ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ವಾಸುದೇವಮೂರ್ತಿ ಮಾತನಾಡಿದರು. ತಾ.ಪಂ. ಇಒ ಶಿವಪ್ಪ ಸುಬೇದಾರ ಇದ್ದರು   

ಕುಷ್ಟಗಿ: ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನರೇಗಾದಲ್ಲಿ ಜಾರಿಗೊಳಿಸಿರುವ ‘ಅಂತರ್ಜಲ ಚೇತನ' ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ನೆರವಾಗುವ 'ಕ್ಲಾರ್ಟ್‌ (ಕಾಂಪೊಜಿಟ್‌ ಲ್ಯಾಂಡ್‌ಸ್ಕೇಪ್ ಅಸೆಸ್‌ಮೆಂಟ್‌ ಅಂಡ್‌ ರಿಸ್ಟೋರೇಶನ್ ಟೂಲ್‌) ಎಂಬ ಮೊಬೈಲ್‌ ಅಪ್ಲಿಕೇಶನ್ ಅನ್ನು ಸೂಕ್ತ ರೀತಿಯಲ್ಲಿ ಬಳಸಬೇಕಿದೆ ಎಂದು ಯೋಜನೆ ಜಿಲ್ಲಾ ಸಂಯೋಜಕ ವಾಸುದೇವಮೂರ್ತಿ ಹೇಳಿದರು.

ಈ ಆಪ್‌ ಬಳಕೆ ಕುರಿತಂತೆ ಸೋಮವಾರ ಸಮುದಾಯ ತಾಂತ್ರಿಕ ಸಹಾಯಕರು ಮತ್ತು ತಾಂತ್ರಿಕ ಸಹಾಯಕರಿಗೆ ಇಲ್ಲಿಯ ತಾ.ಪಂ.ನಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಕ್ಲಾರ್ಟ್ ಆ್ಯಪ್‌ ಬಳಕೆ ಕುರಿತು ಅಗತ್ಯ ಮಾಹಿತಿ ನೀಡಿ, ನಿರ್ದಿಷ್ಟ ಮತ್ತು ಸೂಕ್ತ ಸ್ಥಳ ಗುರುತಿಸುವಿಕೆಯಲ್ಲಿ ಆ್ಯಪ್‌ ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದರು.

ತಾಲ್ಲೂಕು ಮಟ್ಟದ ಸಮಿತಿಯ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಚಟುವಟಿಕೆ ಕೈಗೊಳ್ಳುವುದು. ಜಲಾನಯನ ಪ್ರದೇಶವನ್ನು ನಿರ್ಧರಿಸುವ ಸಂಬಂಧ ಯೋಜನೆ ರೂಪಿಸುವಲ್ಲಿ ಗ್ರಾ.ಪಂ.ಗಳಿಗೆ ಸಮುದಾಯ ತಾಂತ್ರಿಕ ಸಹಾಯಕರು ಮತ್ತು ತಾಂತ್ರಿಕ ಸಹಾಯಕರು ಅಗತ್ಯ ತಾಂತ್ರಿಕ ನೆರವು ನೀಡಬೇಕಾಗುತ್ತದೆ ಎಂದು ವಿವರಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಇಒ ಶಿವಪ್ಪ ಸುಬೇದಾರ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ನಿರ್ದಿಷ್ಟವಾಗಿ ಗುರುತಿಸುವ ಸ್ಥಳದಲ್ಲಿ ಅರಣ್ಯೀಕರಣ, ವೈಜ್ಞಾನಿಕ ರೀತಿಯಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳ ಮೂಲಕ ಭೂ ಸವಕಳಿಯನ್ನು ನಿಯಂತ್ರಿಸಿ ಹಸಿರು ಪ್ರದೇಶವನ್ನು ಹೆಚ್ಚಿಸುವಲ್ಲಿ ಅಂತರ್ಜಲ ಚೇತನ ಉತ್ತಮ ಯೋಜನೆಯಾಗಿದೆ ಎಂದರು.

ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ವಿಶ್ವನಾಥ ರಾಠೋಡ, ನರೇಗಾ ಐಇಸಿ ಸಂಯೋಜಕ‌ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಬಸವರಾಜ ಸೇರಿದಂತೆ ತಾಲ್ಲೂಕು ಮಟ್ಟದ ತಾಂತ್ರಿಕ ಸಹಾಯಕರು, ಸಮುದಾಯ ತಾಂತ್ರಿಕ ಸಹಾಯಕರು ತರಬೇತಿ ಕಾರ್ಯಾಗಾರದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.