ADVERTISEMENT

ಅಸ್ತಿತ್ವ ಉಳಿಸಿಕೊಳ್ಳಲು‌ ಬಿಜೆಪಿಯೊಂದಿಗೆ ಮೈತ್ರಿ: ಜಿ.ಟಿ.‌ದೇವೇಗೌಡ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 7:36 IST
Last Updated 27 ಸೆಪ್ಟೆಂಬರ್ 2023, 7:36 IST
<div class="paragraphs"><p>ಜಿ.ಟಿ.‌ದೇವೇಗೌಡ</p></div>

ಜಿ.ಟಿ.‌ದೇವೇಗೌಡ

   

ಕೊಪ್ಪಳ: ನಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ಜೊತೆ ಕೈ ಜೋಡಿಸಿದ್ದೇವೆ. ಇದು ನಮಗೆ ಅನಿವಾರ್ಯ ಹಾಗೂ ಅಗತ್ಯವೂ ಆಗಿತ್ತು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ನಿಗದಿಯಾಗಿರುವ ಜೆಡಿಎಸ್ ಪುನಶ್ಚೇತನ ವಿಭಾಗ ಮಟ್ಟದ ಸಭೆಗೂ‌ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷಕ್ಕೆ ಅವಕಾಶಗಳು ಸಾಕಷ್ಟಿವೆ. ಶಾಸಕರಾದವರು ಸಂಸದರಾಗಬಹುದು, ಇನ್ನೂ ಕೆಲವರು ವಿಧಾನ ಪರಿಷತ್ ಸದಸ್ಯರೂ ಆಗಬಹುದು ಎಂದರು.

ADVERTISEMENT

ಪಕ್ಷದ ಸಂಘಟನೆ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಕಲಬುರಗಿ ಮೂಲಕ ಆರಂಭಿಸಿದ್ದೇವೆ. ಎರಡನೇ ಕಾರ್ಯಕ್ರಮ ಕೊಪ್ಪಳದಲ್ಲಿ ‌ಹಮ್ಮಿಕೊಂಡಿದ್ದೇವೆ. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಅಲ್ಪಸಂಖ್ಯಾತರು ನಮ್ಮ ಪಕ್ಷವನ್ನು ‌ಬಿಟ್ಟು ಹೋಗುವುದಿಲ್ಲ. ಕಲಬರಗಿಯಲ್ಲಿ ಮಂಗಳವಾರ ನಡೆದ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ನಮ್ಮ ಪಕ್ಷ‌ ಸೇರ್ಪಡೆಯಾಗಿದ್ದಾರೆ ಎಂದರು.

ಬಿಜೆಪಿ ಜೊತೆಗೆ ನಾವು ಕೈ ಜೋಡಿಸಿದರೂ ಜೆಡಿಎಸ್ ತನ್ನ ತತ್ವ ಹಾಗೂ ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ. ರೈತರ ಪರವಾಗಿಯೇ ನಾವು ಇರುತ್ತೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರ ಹಿತವನ್ನೇ ಬಲಿಕೊಡುತ್ತಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ವಿರೋಧಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಅಲ್ಪಸಂಖ್ಯಾತರು ಈಗಲೂ ನಮ್ಮ ಜೊತೆಗೆ ಇದ್ದಾರೆ. ಮುಂದೆಯೂ ಇರುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ ಭವಿಷ್ಯದ ಎಲ್ಲ ಚುನಾವಣೆಗಳಲ್ಲಿಯೂ ಈಗಿನ ಮೈತ್ರಿ ಇದ್ದೇ ಇರುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.