
ಅಳವಂಡಿ: ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಾಲಚಂದ್ರನ್.ಎಸ್ ಮಾತನಾಡಿ, ‘ಜನರಿಗೆ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದ್ದು, ಅರ್ಹ ಫಲಾನುಭವಿಗಳಿಗೆ ದೂರವಾಗದಂತೆ ಕ್ರಮ ವಹಿಸಬೇಕು’ ಎಂದರು.
‘ರೇಷನ್ ಕಾರ್ಡ್‌ಗಳು ರದ್ದಾಗುತ್ತಿದ್ದು ಇದರಿಂದ ಬಡವರಿಗೆ ಅನ್ಯಾಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶ್ರೀಮಂತರಲ್ಲಿ ಇಂತಹ ಕಾರ್ಡ್‌ಗಳಿದ್ದರೆ ರದ್ದು ಮಾಡಿ. ಆದರೆ ನಿಜವಾಗಿಯೂ ಅರ್ಹತೆ ಇದ್ದರೆ ಪರಿಶೀಲಿಸಿ ಕಾರ್ಡ್ ಉಳಿಸಿಕೊಳ್ಳುವ ಕೆಲಸವಾಗಬೇಕು’ ಎಂದು ಗ್ಯಾರಂಟಿ ಸಮಿತಿ ಹಾಗೂ ಗ್ರಾ.ಪಂ ಸದಸ್ಯರು ಒತ್ತಾಯಿಸಿದರು. ‘ಅವಶ್ಯವಿರುವ ದಾಖಲಾತಿಗಳನ್ನು ಸಲ್ಲಿಸಿದಲ್ಲಿ ಅವುಗಳನ್ನು ಪರಿಶೀಲಿಸಿ ಕ್ರಮವಹಿಸಲಾಗುವದು’ ಎಂದು ಸಭೆಯಲ್ಲಿ ತಹಶೀಲ್ದಾರ್ ವಿವರಿಸಿದರು.
ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಾರ್ಡ್ ಎನ್ನುವ ಬಗ್ಗೆ ಪ್ರತಿ ಕಾರ್ಡ್ ಮೇಲೆ ನಮೂದಿಸುವಂತೆ ಮತ್ತು ವಿವರಗಳನ್ನು ನಾಮಫಲಕದಲ್ಲಿ ಪ್ರದರ್ಶಿಸುವುದು. ಬಹಳಷ್ಟು ಕಾರ್ಡ್‌ಗಳು ರದ್ದಾಗಿದ್ದು ಅದರಲ್ಲಿ ಕಡುಬಡುವರಿದ್ದು ಅವರ ಪಡಿತರ ಚೀಟಿಗಳನ್ನು ಪುನಃ ಪ್ರಾರಂಭಿಸುವಂತೆ ಸದಸ್ಯೆ ಜ್ಯೋತಿ ಗೊಂಡಬಾಳ ಸಭೆಯಲ್ಲಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಡಿತರ ಎನ್ನುವ ಬದಲಾಗಿ ಏಕರೀತಿಯ ಪಡಿತರ ವಿತರಣೆ ಮಾಡುವ ಕ್ರಮವಾಗಬೇಕು ಎಂದು ಸದಸ್ಯ ಮಾನ್ವಿ ಪಾಶಾ ಸಭೆಯ ಗಮನಕ್ಕೆ ತಂದರು.
‘ಕವಲೂರು ಮತ್ತು ಅಳವಂಡಿ ವಿದ್ಯುತ್ ಮಾರ್ಗ ಒಂದೇ ಇದ್ದು ಪ್ರತ್ಯೇಕ ಮಾಡಬೇಕು. ಶಾಲಾ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಭೈರಾಪುರ, ಮೋರನಾಳ, ಬೆಟಗೇರಿ, ಘಟ್ಟರಡ್ಡಿಹಾಳ ಹಾಗೂ ಮುರ್ಲಾಪುರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಅಳವಂಡಿಯಿಂದ ಗದಗ ಮಾರ್ಗವಾಗಿ ಹುಬ್ಬಳ್ಳಿಗೆ, ಕೊಪ್ಪಳದಿಂದ ಮಂಗಳೂರು ಕಡೆಗೆ ಸಂಚರಿಸುವ ಬಸ್ ಬೆಟಗೇರಿ ಗ್ರಾಮಕ್ಕೆ ಬರುತ್ತಿರುವದಿಲ್ಲ. ಕಡ್ಡಾಯವಾಗಿ ಬೆಟಗೇರಿ ಗ್ರಾಮಕ್ಕೆ ಬರುವಂತೆ ಕ್ರಮವಹಿಸಲು’ ಎಂದು ಸದಸ್ಯರು ಸಭೆಯಲ್ಲಿ ತಿಳಿಸಿದರು.
ತಹಶೀಲ್ದಾರ್ ವಿಠಲ್ ಚೌಗಲೆ, ತಾ.ಪಂ. ಇಒ ದುಂಡಪ್ಪ ತುರಾದಿ, ಗ್ರಾ.ಪಂ.ಅಧ್ಯಕ್ಷೆ ಶಂಕ್ರಮ್ಮ ಜೋಗಿನ್, ಉಪಾಧ್ಯಕ್ಷೆ ಶಾರಮ್ಮ ಇಳಗೇರಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ್ ನಡುವಿನಮನಿ, ರಮೇಶ ಹ್ಯಾಟಿ, ಸವಿತಾ ಗೊರಂಟ್ಲಿ, ಅನ್ನದಾನಸ್ವಾಮಿ, ಪರಶುರಾಮ ಕೊರವರ, ಮೆಹಬೂಬಪಾಷಾ ಮಾನ್ವಿ, ಲಕ್ಷ್ಮಣ್ಣ ಡೊಳ್ಳಿನ, ಅನ್ವರ್ ಗಡಾದ, ಜ್ಯೋತಿ ಗೊಂಡಬಾಳ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾ ಅಧಿಕಾರಿಗಳು, ತಾ.ಪಂ. ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.