ಗಂಗಾವತಿ: ‘ಲಿಂಗಾಯತ, ಲಿಂಗವಂತ ಪದಗಳು ವೀರಶೈವದ ಪರ್ಯಾಯ ಪದಗಳು. ವೀರಶೈವ ಪದಕ್ಕೆ ಇರುವ ಶಕ್ತಿ, ಲಿಂಗಾಯತ ಪದಕ್ಕಿಲ್ಲ’ ಎಂದು ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಅನ್ನದಾನ ಮಹಾಶಿವಯೋಗಿ ಅಭಿಪ್ರಾಯಪಟ್ಟರು.
ನಗರದ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ನಡೆದ ಹಾನಗಲ್ಲ ಕುಮಾರಮಹಾಸ್ವಾಮಿಯ 158ನೇ ಜಯಂತಿ ಮಹೋತ್ಸವ ಹಾಗೂ ಜೀವನ ಆದರ್ಶ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಅವರು ಮಾತನಾಡಿದರು.
‘ಗುರುವಿನಿಂದ ಲಿಂಗ ಆಯತ ಮಾಡಿಕೊಂಡು, ಲಿಂಗ ಪೂಜೆ ಮಾಡುವವನೇ ಲಿಂಗಾಯತ. ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ತಲ್ಲೀನ ಆಗುವುದು ವೀರಶೈವದ ಭಾಗ. ಇದನ್ನೇ ಬಸವಣ್ಣ ಸಮಾಜಕ್ಕೆ ಸಾರಿದ್ದಾರೆ. ವೀರಶೈವ ಧರ್ಮ ತುಂಬಾ ಪ್ರಾಚೀನವಾದದ್ದು, ಅಧ್ಯಾತ್ಮ, ತತ್ವಗಳ ಶ್ರೀಮಂತಿಕೆಯಿಂದ ಕೂಡಿದೆ. ಬಸವಣ್ಣನ ನುಡಿಯಂತೆ ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತೆ ಜನರ ಮನಸ್ಥಿತಿಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕುಮಾರ ಶಿವಯೋಗಿಗಳ ತತ್ವಗಳನ್ನು ಅನುಸರಿಸಬೇಕು’ ಎಂದರು.
‘ಇಂದಿನ ರಾಜಕೀಯ ದಿನಮಾನಗಳಲ್ಲಿ ರಾಜಕಾರಣಿಗಳು ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಹೇಳುತ್ತಾರೆ. ತಮ್ಮ ಲಾಬಿಗೋಸ್ಕರ ಜಾತಿ, ಜಾತಿಯಲ್ಲೇ ಉಪ ಜಾತಿಗಳಾಗಿ ವಿಂಗಡಿಸಿ ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದು ತುಂಬಾ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಜಿ.ಜನಾರ್ದನ ರೆಡ್ಡಿ ಮಾತನಾಡಿ, ‘ಹಾನಗಲ್ ಕುಮಾರೇಶ್ವರರು ಕೇವಲ ಅಧ್ಯಾತ್ಮಕ್ಕೆ ಸೀಮಿತ ಆಗಿರಲಿಲ್ಲ. ಜನರ ಶಿಕ್ಷಣಕ್ಕೆ ಒತ್ತು ನೀಡಿದ್ದರು. ವೀರಶೈವ ಮಠಗಳಿಂದ ರಾಜ್ಯದಲ್ಲಿ ಪುರಾಣ, ಪ್ರವಚನ ನಿತ್ಯ ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ಬಿಟ್ಟರೇ ಇಂತಹದ್ದು ಎಲ್ಲಿಯೂ ಕಾಣಲು ಸಾಧ್ಯವಿಲ್ಲ’ ಎಂದರು.
ಜಯಂತ್ಯುತ್ಸವ ಉದ್ಘಾಟನೆಗೂ ಮುನ್ನ ಎಲ್ಲ ಸ್ವಾಮೀಜಿಗಳು ಹಾನಗಲ್ಲ ಕುಮಾರ ಮಹಾಶಿವಯೋಗಿಗಳು ಹಾಗೂ ಚನ್ನಮಲ್ಲಿಕಾರ್ಜುನ ತಾತನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದಕ್ಕೂ ಮುನ್ನ ಸಿಬಿಎಸ್ ವೃತ್ತದ ಬಳಿ ಈರಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಡೊಳ್ಳು, ಭಜನೆ ಮಂಡಳಿಗಳ ನಾದ- ನಿನಾದಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಜ್ಯೋತಿ ರಥಯಾತ್ರೆಗೆ ಎಲ್ಲ ಸ್ವಾಮೀಜಿಗಳು ಚಾಲನೆ ನೀಡಿದರು. ಚನ್ನಮಲ್ಲಿಕಾರ್ಜುನ ಮಠದವರೆಗೆ ಮೆರವಣಿಗೆ ನಡೆಸಿದರು. ಮಹಿಳೆಯರು ಮೆರವಣಿಗೆಯುದ್ದಕ್ಕೂ ಕಳಸ- ಕುಂಭಗಳನ್ನು ಹೊತ್ತು ಸಾಗಿದರು.
ಅರಳಹಳ್ಳಿಯ ಗವಿಸಿದ್ದಯ್ಯ ತಾತ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಪದ್ಮಯ್ಯ ಸ್ವಾಮೀಜಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವಿರಪ್ಪ, ಮಾಜಿ ಸಂಸದ ಶಿವರಾಮೇಗೌಡ, ಕಾಡಾ ಮಾಜಿ ಅಧ್ಯಕ್ಷ ಗಿರಿಗೌಡ ಸೇರಿ ವಿರಶೈವ ಲಿಂಗಾಯತ ಸಮಾಜದ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಕಳಕನಗೌಡ ಸೇರಿ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.