ADVERTISEMENT

ಬುತ್ತಿಬಸವೇಶ್ವರ ದೇವಸ್ಥಾನದ ಮರಗಳ ಹನನ

ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪರಿಸರವಾದಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 17:33 IST
Last Updated 5 ಜುಲೈ 2018, 17:33 IST
ಕುಷ್ಟಗಿಯ ಬುತ್ತಿಬಸವೇಶ್ವರ ದೇವಸ್ಥಾನದ ಬಳಿ ಖಾಲಿ ಜಾಗದಲ್ಲಿ ಬೆಳೆದ ಬೇವಿನ ಮರಗಳನ್ನು ಕಡಿದಿರುವುದು ಗುರುವಾರ ಕಂಡುಬಂತು
ಕುಷ್ಟಗಿಯ ಬುತ್ತಿಬಸವೇಶ್ವರ ದೇವಸ್ಥಾನದ ಬಳಿ ಖಾಲಿ ಜಾಗದಲ್ಲಿ ಬೆಳೆದ ಬೇವಿನ ಮರಗಳನ್ನು ಕಡಿದಿರುವುದು ಗುರುವಾರ ಕಂಡುಬಂತು   

ಕುಷ್ಟಗಿ: ಪಟ್ಟಣದ ಪುರಾತನ ಬುತ್ತಿಬಸವೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸಿ, ಈ ಸ್ಥಳದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಬುತ್ತಿಬಸವೇಶ್ವರ ದೇವಸ್ಥಾನ ಸಮಿತಿ ಮುಂದಾಗಿದೆ.

ಈ ದೇವಸ್ಥಾನ ಹಾಲಕೆರೆ ಅನ್ನದಾನೇಶ್ವರ ಮಠದ ಉಸ್ತುವಾರಿಯಲ್ಲಿದ್ದು, ಪಕ್ಕದ ಬಯಲಿನಲ್ಲಿ ಬಹಳಷ್ಟು ಮರಗಳು ಬೆಳೆದು ನಿಂತಿವೆ. ಅವುಗಳ ಪೈಕಿ ಈಗಾಗಲೇ ಸುಮಾರು ಆರೇಳು ದೊಡ್ಡಗಾತ್ರದ ಬೇವಿನಮರಗಳನ್ನು ಕಡಿದುಹಾಕಲಾಗಿದೆ. ಆದರೆ, ಮರಗಳನ್ನು ತೆರವುಗೊಳಿಸಿ ಕಾಲೇಜು ಕಟ್ಟಡ ನಿರ್ಮಿಸಲು ಹೊರಟಿರುವ ಸಮಿತಿಯ ನಿರ್ಧಾರವನ್ನು ಪಟ್ಟಣದ ವೀರಶೈವ ಲಿಂಗಾಯತ ಸಮುದಾಯದ ಕೆಲ ಪ್ರಮುಖರು ಆಕ್ಷೇಪಿಸಿದ್ದಾರೆ.

ಈ ಕುರಿತು ಗುರುವಾರ ಇಲ್ಲಿ ಹೇಳಿಕೆ ನೀಡಿದ ಶಶಿಧರ ಕವಲಿ, ಪುರಸಭೆ ಮಾಜಿ ಅಧ್ಯಕ್ಷ ಗಂಗಾಧರ ಹಿರೇಮಠ, ಆದಯ್ಯ ನಂದಿಕೋಲಮಠ ಮತ್ತಿತರರು, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಕಾಲೇಜು ನಿರ್ಮಾಣ ಮಾಡುವುದಕ್ಕೆ ಯಾರದೂ ಅಭ್ಯಂತರ ಇಲ್ಲ. ಅದರಿಂದ ಈ ಭಾಗದ ಮಕ್ಕಳಿಗೆ ಅನುಕೂಲವಾಗುತ್ತದೆ. ಅಂತಹ ಉದ್ದೇಶಕ್ಕೆ ನಾವೂ ಸಹಕರಿಸುತ್ತೇವೆ. ಅಗತ್ಯವಾದರೆ ಹೊರವಲಯದಲ್ಲಿ ಜಮೀನು ಖರೀದಿಸುವುದಕ್ಕೆ ಇಲ್ಲಿಯ ಜನರು ಹಣಕಾಸಿನ ದೇಣಿಗೆ ನೀಡಲೂ ಸಿದ್ಧರಿದ್ದಾರೆ. ಆದರೆ ಇದ್ದ ಗಿಡಗಳನ್ನು ತೆಗೆದು ಕಾಲೇಜು ಕಟ್ಟಡ ನಿರ್ಮಿಸಲು ಹೊರಟಿರುವುದು ಸರಿಯಲ್ಲ’ ಎಂದಿದ್ದಾರೆ.

ADVERTISEMENT

ಅಲ್ಲದೇ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಎಲ್ಲ ಸಮುದಾಯಗಳಿಗೆ ಸೇರಿದ ಸಾಮೂಹಿಕ ಮದುವೆ, ಚಿಂತನಾ ಗೋಷ್ಠಿಗಳು, ಪ್ರವಚನ, ಜಯಂತಿ, ಸಾರ್ವಜನಿಕ ಸಮಾರಂಭಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ವರ್ಷಕ್ಕೆ ಒಮ್ಮೆ ಬೃಹತ್‌ ಪ್ರಮಾಣದಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವ ನಡೆಯುತ್ತಿದ್ದು ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಬಹಳಷ್ಟು ಅನುಕೂಲ ಇರುವುದರಿಂದ ಸಹಸ್ರ ಸಂಖ್ಯೆ ಜನರು ಬರುತ್ತಾರೆ. ಜಾಗದ ಕೊರತೆಯೂ ಇದೆ ಹೀಗಿರುವಾಗ ಕಟ್ಟಡ ನಿರ್ಮಿಸಿದರೆ ಮತ್ತಷ್ಟು ಅನಾಕೂಲವಾಗುತ್ತದೆ. ಸಮಿತಿಯವರು ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಸ್ಪಷ್ಟನೆ: ‘ಈ ಭಾಗದ ಶೈಕ್ಷಣಿಕ ಬೆಳವಣಿಗೆ ಗಮನದಲ್ಲಿರಿಸಿಕೊಂಡು ಕಾಲೇಜು ಕಟ್ಟಡ ಮತ್ತು ದಾಸೋಹ ಭವನ ನಿರ್ಮಿಸಲಾಗುತ್ತದೆ’ ಎಂದು ಬುತ್ತಿಬಸವೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಅಂದಪ್ಪ ಬೀಳಗಿ ಸ್ಪಷ್ಟನೆ ನೀಡಿದರು.

ಹಾಲಕೆರೆ ಅನ್ನದಾನೇಶ್ವರ ಮಠಕ್ಕೆ ಸೇರಿದ ಈ ಭೂಮಿಯನ್ನು ನೆರೆಗಲ್ಲದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಗೆ ಹಸ್ತಾಂತರಿಸಲಾಗಿದ್ದು, 1 ಎಕರೆ 13 ಗುಂಟೆ ಪ್ರದೇಶವನ್ನು ಈಗಾಗಲೇ ಕೃಷಿಯೇತರ ಎಂದು ಪರಿವರ್ತಿಸಲಾಗಿದೆ. ಕಾನೂನಾತ್ಮಕವಾಗಿ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ. ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ಮತ್ತು ಪುರಸಭೆಯಿಂದ ಕಟ್ಟಡ ನಿರ್ಮಾಣದ ಪರವಾನಗಿಯನ್ನೂ ಪಡೆಯಲಾಗಿದೆ’ ಎಂದು ಹೇಳಿದರು.

‘ಮಠಕ್ಕೆ ಸೇರಿದ್ದ ಜಾಗವನ್ನೇ ಸುತ್ತಲಿನ ಕೆಲ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದಾರೆ, ಆದರೂ ಅದನ್ನು ಹಾಗೇ ಬಿಟ್ಟು ಉಳಿದ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಸ್ವತಃ ಅನ್ನದಾನೇಶ್ವರ ಸ್ವಾಮೀಜಿ ಸೂಚಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.