
ಕೊಪ್ಪಳ: ಈಗಿನ ಕನ್ನಡ ಅಕ್ಷರಗಳ ಬರವಣಿಗೆ ನಡುವೆಯೇ ಇಂಗ್ಲಿಷ್ ಅಂಕಿಗಳು ನುಸುಳುವುದು ಸಾಮಾನ್ಯ. ಆದರೆ, ಇಂದರಗಿ ಗ್ರಾಮದ ಕಳಕಪ್ಪ ಕುಂಬಾರ ಅವರು ನಾಲ್ಕು ದಶಕಗಳಿಂದ ಎಲ್ಲ ಅಂಕಿಅಂಶಗಳನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ.
ಇಲ್ಲಿನ ಗಂಜ್‌ನಲ್ಲಿ ಮರಿಶಾಂತವೀರ ಟ್ರೇಡಿಂಗ್ ಕಂಪನಿಯಲ್ಲಿ ಲೆಕ್ಕಪತ್ರ ವ್ಯವಹಾರವನ್ನು ಕಳಕಪ್ಪ ನಿರ್ವಹಣೆ ಮಾಡುತ್ತಾರೆ. 65 ವರ್ಷದ ಅವರು ನಿತ್ಯ ವಹಿವಾಟು ಆರಂಭಿಸುವ ಮೊದಲು ಮಾಸ, ಪಕ್ಷ, ವಾರ, ತಿಥಿ, ದಿನಾಂಕ ಎಲ್ಲವನ್ನೂ ಕನ್ನಡದಲ್ಲಿಯೇ ಬರೆಯುತ್ತಾರೆ. ತಮ್ಮ ಅಂಗಡಿಗೆ ಬಂದ ದಾಸ್ತಾನು, ನಡೆಸಿದ ವಹಿವಾಟು, ರೈತರ ಮೊಬೈಲ್ ಫೋನ್ ಸಂಖ್ಯೆ, ಮಾರಾಟದ ವಿವರ ಹೀಗೆ ಪ್ರತಿಯೊಂದನ್ನೂ ಕನ್ನಡದಲ್ಲಿಯೇ ನಾಲ್ಕು ದಶಕಗಳಿಂದ ದಾಖಲಿಸಿಕೊಂಡು ಬಂದಿದ್ದಾರೆ.
ಅಂಗಡಿಯ ವಹಿವಾಟಿನ ಲೆಕ್ಕಪತ್ರ ನಿರ್ವಹಣೆಗೆ ಪ್ರತಿ ವರ್ಷ ಹೊಸ ಪುಸ್ತಕ ಬಳಸುವ ಅವರು ಹಿಂದಿನ 39 ವರ್ಷಗಳಿಂದಲೂ ಕನ್ನಡದಲ್ಲಿಯೇ ಅಂಕಿಗಳನ್ನು ಬರೆದುಕೊಂಡು ಬಂದಿದ್ದಾರೆ ಎನ್ನುವುದು ವಿಶೇಷ. ಬ್ಯಾಂಕ್‌ಗಳಿಗೆ ಚೆಕ್ ಕೊಡುವಾಗಲೂ ಮೊದಲು ಕನ್ನಡದಲ್ಲಿಯೇ ಅಂಕಿಗಳನ್ನು ಬರೆಯುತ್ತಿದ್ದರು.
ಬ್ಯಾಂಕ್‌ಗಳಲ್ಲಿ ಹೊರರಾಜ್ಯದಿಂದ ಬಂದು ಕೆಲಸ ಮಾಡುವ ನೌಕರರಿಗೆ ಕನ್ನಡ ಅಂಕಿಗಳು ಅರ್ಥವಾಗುವುದಿಲ್ಲ. ದಯವಿಟ್ಟು ಚೆಕ್ ಸಂಖ್ಯೆ ಮಾತ್ರ ಇಂಗ್ಲಿಷ್‌ನಲ್ಲಿ ಬರೆಯಿರಿ ಎಂದು ಬ್ಯಾಂಕ್‌ನವರು ಮನವಿ ಮಾಡಿಕೊಂಡ ಬಳಿಕವಷ್ಟೇ ಅದನ್ನು ಮಾತ್ರ ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ಉಳಿದ ಎಲ್ಲ ವ್ಯವಹಾರವೂ ಕನ್ನಡವೇ.
‘ಅನೇಕರು ಅನೇಕ ರೀತಿಯಲ್ಲಿ ಕನ್ನಡಪ್ರೇಮ ತೋರಿಸುತ್ತಾರೆ. ನಾನು ನನ್ನ ಕೆಲಸದ ಜೊತೆಯಲ್ಲಿ ಕನ್ನಡದ ಬಗ್ಗೆ ಪ್ರೀತಿ ಉಳಿಸಿಕೊಂಡಿದ್ದೇನೆ. ಇದೇ ಕನ್ನಡ ತಾಯಿ ಭುವನೇಶ್ವರಿಗೆ ಸಲ್ಲಿಸುವ ಗೌರವವೆಂದು ಭಾವಿಸಿದ್ದೇನೆ’ ಎಂದು ಕಳಕಪ್ಪ ಕುಂಬಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.