ADVERTISEMENT

ನಿಷೇಧದ ನಡುವೆ ಹನುಮಮಾಲಾ ವಿಸರ್ಜನೆ

ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿಯಲ್ಲಿ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 22:16 IST
Last Updated 16 ಡಿಸೆಂಬರ್ 2021, 22:16 IST
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಗುರುವಾರ ಹನುಮ ಮಾಲಾ ವಿಸರ್ಜನೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಾಲಾಧಾರಿಗಳು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಗುರುವಾರ ಹನುಮ ಮಾಲಾ ವಿಸರ್ಜನೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಮಾಲಾಧಾರಿಗಳು   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿಯಲ್ಲಿ ಗುರುವಾರ ಜಿಲ್ಲಾಡಳಿತವು ನಿಷೇಧ ವಿಧಿಸಿದ್ದರೂ ಹನುಮಮಾಲಾ ವಿಸರ್ಜನೆ ಕಾರ್ಯ ಅದ್ಧೂರಿಯಾಗಿ ನಡೆಯಿತು.

ರಾಜ್ಯದ ವಿವಿಧೆಡೆಯಿಂದ ಬಂದ 35 ಸಾವಿರಕ್ಕೂ ಹೆಚ್ಚಿನ ಮಾಲಾಧಾರಿಗಳು ಅಂಜನಾದ್ರಿಯ 524 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದರು. ನಂತರ ಮಾಲೆ ವಿಸರ್ಜನೆ ಮಾಡಿದರು.

ಕೊರೊನಾ ಸೋಂಕು ಪ್ರಸರಣ ನಿಯಂತ್ರಿಸಲು ಜಿಲ್ಲಾಡಳಿತವು ನಿಷೇಧಾಜ್ಞೆ ಹೊರಡಿಸಿತ್ತು. ಆದರೆ, ಅಪಾರ ಸಂಖ್ಯೆಯಲ್ಲಿ ಮಾಲಾಧಾರಿಗಳು ಬಂದ ಕಾರಣ ಪೊಲೀಸರಿಗೆ ಸಂಪೂರ್ಣ ನಿಷೇಧ ಜಾರಿಗೊಳಿಸಲು ಆಗಲಿಲ್ಲ.

ADVERTISEMENT

ಅಂಜನಾದ್ರಿ ಬೆಟ್ಟದ ಕೆಳಗೆ 8 ಕಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ವಿವಿಧ ಸಂಘಟನೆಗಳ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

450ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ನಾಲ್ಕು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷದ ಉತ್ಸವಕ್ಕಿಂತ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಯಿಂದ ಹನುಮಮಾಲಾಧಾರಿಗಳು ಒಂದು ವಾರದ ಪಾದಯಾತ್ರೆ ಕೈಗೊಂಡು ಅಂಜನಾದ್ರಿ ತಲುಪಿದರು.

ಯುವಕರನ್ನು ಥಳಿಸಿ ಬಟ್ಟೆ ಹರಿದ ಮಾಲಾಧಾರಿಗಳು
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಗುರುವಾರ ‘ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ವಿಡಿಯೊ ಮಾಡುತ್ತಿದ್ದರು’ ಎಂದು ಆರೋಪಿಸಿ ಮೂವರು ಯುವಕರನ್ನು ಮಾಲಾಧಾರಿಗಳು ಮನಸೋ ಇಚ್ಛೆ ಥಳಿಸಿದರು.ಗಂಜಾಂ ಬಳಿ ಯಾತ್ರೆಯ ವಿಡಿಯೊ ಮಾಡುತ್ತಿದ್ದ ಯುವಕನಿಗೆ ಮಾಲಾಧಾರಿಗಳ ಗುಂಪು ಮೊದಲು ಥಳಿಸಿತು. ಪೊಲೀಸರು ತಕ್ಷಣ ಸುತ್ತುವರಿದು ಯುವಕನನ್ನು ವಶಕ್ಕೆ ಪಡೆದರು. ಬಳಿಕ ಮೆರವಣಿಗೆಯು ಪಟ್ಟಣದ ಮಸ್ಜಿದ್‌–ಎ–ಅಲಾ (ಟಿಪ್ಪು ಮಸೀದಿ) ಬಳಿ ಬಂದಾಗ ಇಬ್ಬರು ಯುವಕರು ವಿಡಿಯೊ ಮಾಡುತ್ತಿದ್ದರು. ಆಗ ಮತ್ತೆ 50ಕ್ಕೂ ಹೆಚ್ಚು ಮಾಲಾಧಾರಿಗಳು ಯುವಕರನ್ನು ಬೆನ್ನಟ್ಟಿ ಹಿಡಿದು ಥಳಿಸಿದರು. ಕೆಳಕ್ಕೆ ಕೆಡವಿ ಬಟ್ಟೆಗಳನ್ನು ಹರಿದು ಹಾಕಿದರು. ಅವರನ್ನೂ ಪೊಲೀಸರು ವಶಕ್ಕೆ ಪಡೆದರು.

ಯುವಕರನ್ನು ರಕ್ಷಿಸಿದ ಪೊಲೀಸರ ವಿರುದ್ಧವೇ ಮಾಲಾಧಾರಿಗಳು ತಿರುಗಿ ಬಿದ್ದರು. ವಶಕ್ಕೆ ಪಡೆದಿರುವವರನ್ನು ಬಿಟ್ಟುಕೊಡುವಂತೆ ಮಾಲಾಧಾರಿಗಳ ಗುಂಪು ಒತ್ತಾಯಿಸಿತು. ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮಸ್ಜಿದ್‌–ಎ–ಅಲಾ ಬಳಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಹಿಂದೂ ಜಾಗರಣ ವೇದಿಕೆಯ ಮುಖಂಡರು ಸ್ಥಳಕ್ಕೆ ಧಾವಿಸಿ ಮಾಲಾಧಾರಿಗಳನ್ನು ಸಮಾಧಾನಪಡಿಸಿದರು. ನಂತರ ಸಂಕೀರ್ತನಾ ಯಾತ್ರೆ ಶ್ರೀರಂಗನಾಥಸ್ವಾಮಿ ದೇವಾಲಯದತ್ತ ಮುನ್ನಡೆಯಿತು.

ವಿಡಿಯೊ ಮಾಡುತ್ತಿದ್ದರು ಎನ್ನಲಾದ ಮೈಸೂರಿನ ಇಸ್ಮಾಯಿಲ್‌, ಅಬ್ರಾರ್‌ ಮತ್ತು ಗಂಜಾಂನ ಮಹಮದ್‌ ಸಿರಾಜ್‌ ಸದ್ಯ ಪೊಲೀಸರ ವಶದಲ್ಲಿದ್ದಾರೆ. ‘ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹಿಂದೂ ಧರ್ಮದತ್ತ ಮುಸ್ಲಿಂ ಮಹಿಳೆಯರ ಒಲವು’
ಶ್ರೀರಂಗಪಟ್ಟಣ: ‘ಇಸ್ಲಾಂ ಧರ್ಮವನ್ನು ಇಷ್ಟಪಡದ 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ಹಿಂದೂ ಧರ್ಮಕ್ಕೆ ಬರಲು ಒಲವು ತೋರುತ್ತಿದ್ದಾರೆ’ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ದೊ.ಕೇಶವಮೂರ್ತಿ ಪ್ರತಿಪಾದಿಸಿದರು.

ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಪ್ರಯುಕ್ತ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿ, ‘ವಿವಿಧ ಕಾರಣಗಳಿಗೆ ಹಿಂದೂ ಧರ್ಮವನ್ನು ತ್ಯಜಿಸಿ ಮತ್ತೆ ಮಾತೃ ಧರ್ಮಕ್ಕೆ ಬರಲು ಆಸಕ್ತಿ ತೋರುತ್ತಿರುವವರನ್ನು ಬರಮಾಡಿಕೊಳ್ಳಲು ನಾವು ಸಿದ್ಧರಾಗಬೇಕು’ ಎಂದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ಡಾ.ವಿ.ಭಾನುಪ್ರಕಾಶ್‌ ಶರ್ಮಾ ಮಾತನಾಡಿ, ‘ಉತ್ತರದ ಗಯಾ ಕ್ಷೇತ್ರದಂತೆ ದಕ್ಷಿಣದಲ್ಲಿ ಶ್ರೀರಂಗಪಟ್ಟಣ ಪವಿತ್ರ ಕ್ಷೇತ್ರ. ಪಟ್ಟಣದ 8 ದಿಕ್ಕುಗಳಲ್ಲಿ ಆಳರಸರು ಆಂಜನೇಯನ ಮೂರ್ತಿಗಳನ್ನು ಸ್ಥಾಪಿಸಿದ್ದರು. ಆ ಪೈಕಿ ಪಟ್ಟಣದ ಮೂಡಲಬಾಗಿಲು ಆಂಜನೇಯಸ್ವಾಮಿ ಮೂರ್ತಿಯನ್ನು ಮೂಲ ದೇಗುಲದಿಂದ ಇಕ್ಕಟ್ಟಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅದು ಮತ್ತೆ ಮೂಲ ಸ್ಥಳದಲ್ಲಿ ಪ್ರತಿಷ್ಠಾಪನೆಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.