ADVERTISEMENT

ಹನುಮಸಾಗರ | ರಸ್ತೆಗಳು ಕೆಸರುಗದ್ದೆಗಳಾದಾಗ!

ಹನುಮಸಾಗರ-ಗಜೇಂದ್ರಗಡ ರಾಜ್ಯ ರಸ್ತೆಯ ದುಸ್ಥಿತಿ: ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:51 IST
Last Updated 30 ಜುಲೈ 2025, 5:51 IST
ಹನುಮಸಾಗರದಿಂದ ಗಜೇಂದ್ರಗಡಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿರುವುದು
ಹನುಮಸಾಗರದಿಂದ ಗಜೇಂದ್ರಗಡಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿರುವುದು   

ಹನುಮಸಾಗರ: ಹನುಮಸಾಗರದಿಂದ ಗಜೇಂದ್ರಗಡಕ್ಕೆ ಸಂಪರ್ಕಿಸುವ ರಾಜ್ಯ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಗಜೇಂದ್ರಗಡ, ಗದಗ ಕಡೆಗೆ ಹೋಗುವ ಬಸ್ಸುಗಳು ಎಲ್ಲಾ ವಾಹನಗಳು ಈ ರಸ್ತೆಯನ್ನು ಅವಲಂಬಿಸಿವೆ. ನಿರಂತರ ಮಳೆಯಿಂದಾಗಿ ಡಾಂಬರು ಕಿತ್ತುಹೋಗಿ ರಸ್ತೆ ಕೆಸರು ಗದ್ದೆಯಂತಾಗಿದೆ.

‘ಈ ರಸ್ತೆಯಲ್ಲಿ ಕಾಲು ಜಾರಿದರೆ ಮೂಳೆ ಮುರಿಯುವುದು ಖಚಿತ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಇದೇ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅಡ್ಡಾಡುತ್ತಾರೆ. ಸಾರ್ವಜನಿಕರು ನಾನಾ ಹಳ್ಳಿಗಳಿಗೆ, ತಮ್ಮ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ನಿತ್ಯವೂ ಕೆಸರಿನ ರಸ್ತೆಯಲ್ಲಿ ನಡೆಯಬೇಕಿದೆ’ ಎಂದು ಸರ್ವೋದಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದೂರುತ್ತಾರೆ.

ರಸ್ತೆಯ ಎರಡೂ ಬದಿಯಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಈ ರಸ್ತೆ ದುರಸ್ತಿಗೆ ಯಾವ ಜನಪ್ರತಿನಿಧಿಗಳು ಆಸಕ್ತಿ ತೋರದಿರುವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯು ಬಹಳ ಇಕ್ಕಟ್ಟಾಗಿದ್ದು ಯಾವುದಾದರೂ ದೊಡ್ಡ ವಾಹನ ಬಂದರೆ ಜನಸಾಮಾನ್ಯರು ಜೀವ ಕೈಯಲ್ಲಿಟ್ಟು ಸಾಗಬೇಕು. ಹಾಗೋ ಹೀಗೋ ವಾಹನದಿಂದ ಪಾರಾಗಿ ಬಂದರೂ ಕೆಸರು ಮೈಮೇಲೆ ಬಿದ್ದಿರುವ ಉದಾಹರಣೆಗಳು ಇವೆ.

ADVERTISEMENT

ಮನವಿಗೆ ಸ್ಪಂದನೆ ಇಲ್ಲ: ರಸ್ತೆ ದುರಸ್ತಿಗಾಗಿ ಕಳೆದ ವರ್ಷಗಳಿಂದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಲವಾರು ವರ್ಷಗಳಿಂದ ಟೆಂಡರ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಕಾಮಗಾರಿಗೆ ಮನಸ್ಸು ಮಾಡುತ್ತಿಲ್ಲ. ಬೇರೆ ಗ್ರಾಮಗಳಿಂದ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹನುಮಸಾಗರ ಸಮೀಪದ ಹಾಬಲಕಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗಡಚಿಂತಿ ಗ್ರಾಮದ ರಸ್ತೆ ಪರಿಸ್ಥಿತಿಯು ಹೇಳತೀರದಾಗಿದೆ. ಇಲ್ಲಿಯ ಗ್ರಾಮದ ಮಸೂತಿಯಿಂದ ಮಲ್ಲಪ್ಪ ಗರೇಬಾಳ ಮನೆ ಮತ್ತು ಶರಣಪ್ಪಜ್ಜ ಅಬ್ಬಿಗೇರಿಯವರ ಮನೆಯ ರಸ್ತೆ ಸಂಚಾರಕ್ಕೆ ಜನರು ಪರದಾಡುತ್ತಿದ್ದು, ರಸ್ತೆಯ ಮೇಲೆ ಚರಂಡಿ ನೀರು ಹಾಗೂ ಮಳೆಯ ನೀರು ನಿಂತಿದ್ದು ರೋಗರುಜಿನಗಳಿಗೆ ಆಹ್ವಾನ ನೀಡುವಂತಿದೆ. ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ಉಂಟಾಗಿದೆ. ಮಳೆಗಾಲ ಇರುವುದರಿಂದ ಮಲೇರಿಯಾ, ಡೆಂಗಿ ರೋಗದ ಭೀತಿ ನಿರ್ಮಾಣವಾಗಿದೆ. ಆದಷ್ಟೂ ಬೇಗನೆ ರಸ್ತೆ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಗಡಚಿಂತಿ ಗ್ರಾಮದ ಶರಣಪ್ಪಜ್ಜರ ಮನೆಯ ಮುಂಭಾಗ ರಸ್ತೆ

ಹಲವು ಬಾರಿ ಮನವಿ ಸಲ್ಲಿಸಿದರೂ ಇಲ್ಲ ಸ್ಪಂದನೆ ರಸ್ತೆಯ ಎರಡೂ ಬದಿಯಲ್ಲಿ ಜಾಲಿ ಗಿಡಗಳು ವಾಹನ ಸವಾರರಿಗೆ ತೀವ್ರ ತೊಂದರೆ

ರಸ್ತೆಯ ಹಾಳಾಗಿರುವ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸ್ಪಂದನೆ ಶೂನ್ಯವಾಗಿದೆ. ಶೀಘ್ರ ದುರಸ್ತಿ ಮಾಡಬೇಕು

- ರಾಹುಲ್ ದೇವಸಿಂಗ್ ಕೆಆರ್‌ಎಸ್‌ ಪಕ್ಷದ ಜಿಲ್ಲಾ ಉಪಾಧ್ಯಕ್ಷ

ರಸ್ತೆ ದುರಸ್ತಿಗೆ ತಕ್ಷಣ ಕ್ರಮಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿಯ ಮುಂದೆ ನಿವಾಸಿಗಳ ಜತೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ

-ಯಮನೂರಪ್ಪ ಆರ್. ಅಬ್ಬಿಗೇರಿ ಗ್ರಾಮಸ್ಥ

ಹನುಮಸಾಗರ–ಗಜೇಂದ್ರಗಡ ರಸ್ತೆ ಕಾಮಗಾರಿಗೆ ಆಗಸ್ಟ್‌ 7ರ ನಂತರ ಟೆಂಡರ್ ಅಲರ್ಟ್ ಆಗುತ್ತದೆ. ಬಳಿಕ 15 ದಿನದಲ್ಲಿ ಕೆಲಸವನ್ನು ಪ್ರಾರಂಭಿಸಲಾಗುತ್ತದೆ.

-ರಾಜಶೇಖರಗೌಡ ಮಾಲಿಪಾಟೀಲ ಎಇಇಆರ್‌ಡಿಪಿಆರ್‌ ಎಂಜಿನಿಯರಿಂಗ್ ವಿಭಾಗ ಕುಷ್ಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.