ADVERTISEMENT

ಹನುಮಸಾಗರ: ರೈತನ ಬದುಕರಳಿಸಿದ ‘ಚೆಂಡು ಹೂ’

ಸಾವಯವ ಪದ್ಧತಿ ಅಳವಡಿಕೆ: ತಿಪಟೂರಿನ ವ್ಯಾಪಾರಿಗಳೊಂದಿಗೆ ಒಪ್ಪಂದ

ಕಿಶನರಾವ್‌ ಕುಲಕರ್ಣಿ
Published 28 ಜುಲೈ 2021, 6:25 IST
Last Updated 28 ಜುಲೈ 2021, 6:25 IST
ಹನುಮಸಾಗರ ಸಮೀಪದ ಗಡಚಿಂತಿಯಲ್ಲಿ ರೈತ ಶರಣಪ್ಪ ಗುಡ್ಡದ ಅವರ ಹೊಲದಲ್ಲಿ ಕಾರ್ಮಿಕರು ಚೆಂಡು ಹೂ ಕೊಯ್ಲು ಮಾಡುತ್ತಿರುವುದು
ಹನುಮಸಾಗರ ಸಮೀಪದ ಗಡಚಿಂತಿಯಲ್ಲಿ ರೈತ ಶರಣಪ್ಪ ಗುಡ್ಡದ ಅವರ ಹೊಲದಲ್ಲಿ ಕಾರ್ಮಿಕರು ಚೆಂಡು ಹೂ ಕೊಯ್ಲು ಮಾಡುತ್ತಿರುವುದು   

ಹನುಮಸಾಗರ: ಕಲ್ಲಂಗಡಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆದು, ಬೆಲೆ ಹಾಗೂ ಬೆಳೆಯಿಂದ ಸೋತು ಹೋಗಿದ್ದ ತಾಲ್ಲೂಕಿನ ಅನೇಕ ಸಣ್ಣ ರೈತರು ಅಲ್ಪಾವಧಿ ಬೆಳೆಯಾಗಿರುವ ಪುಷ್ಪ ಕೃಷಿಯತ್ತ ವಾಲಿದ್ದಾರೆ.

ಉತ್ತಮವಾಗಿ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಸಮೀಪದ ಗಡಚಿಂತಿ ಗ್ರಾಮದ ರೈತ ಶರಣಪ್ಪ ಗುಡ್ಡದ ಉತ್ತಮ ಇಳುವರಿಯ ಚೆಂಡು ಹೂವು ಬೆಳೆದು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ADVERTISEMENT

ಸಾವಯವ ವಿಧಾನದಲ್ಲಿ ಖರ್ಚಿಲ್ಲದೆ ಬೆಳೆದ ಚೆಂಡು ಹೂವಿನ ಮೊದಲ ಬೆಳೆ ಅವರಿಗೆ ಕೈ ತುಂಬ ಕಾಸು ತಂದುಕೊಟ್ಟಿದೆ.

ಮಾರಿಗೋಲ್ಡ್, ಮೇರಿ ಮೊಗ್ಗು, ಚಿನ್ನದ ಹೂವು ಎಂದೆಲ್ಲ ಕರೆಯಲಾಗುವ ಈ ಪುಷ್ಪಕ್ಕೆ ಈಚೆಗೆ ಬೇಡಿಕೆ ಹೆಚ್ಚಿದೆ.

ಆಕರ್ಷಕ ಕಡುಗೆಂಪು ಸೇರಿದಂತೆ ವಿವಿಧ ಬಣ್ಣಗಳ ಈ ಹೂವುಗಳಿಂದ ಔಷಧಿ, ಬಣ್ಣ ಹಾಗೂ ಸುಗಂಧ ದ್ರವ್ಯ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಈ ಮೊದಲು ಈ ಭಾಗದಲ್ಲಿ ದೀಪಾವಳಿ ಸಂದರ್ಭಕ್ಕೆಂದೇ ಅಲಂಕಾರಕ್ಕಾಗಿ ಹೂವುಗಳನ್ನು ಬೆಳೆಯುತ್ತಿದ್ದರು. ಆದರೆ ಸದ್ಯ ರೈತರ ವರಸೆ ಬದಲಾಗಿದ್ದು, ಅಲಂಕಾರಕ್ಕೆ ಮಾರುವ ಬದಲು ಕಂಪನಿಗಳಿಗೆ ನೀಡುತ್ತಿದ್ದಾರೆ.

ಶರಣಪ್ಪ ಅವರ ಎರಡು ಎಕರೆ ನೀರಾವರಿ ಜಮೀನಿನಲ್ಲಿ ಸಾವಯವ ವಿಧಾನದಲ್ಲಿ ಬೆಳೆದ ಬೆಳೆ ಉತ್ಕೃಷ್ಟ ಮಟ್ಟದ ಹೂವುಗಳನ್ನು ಬಿಟ್ಟಿದೆ. ಈಗಾಗಲೇ 10 ಟನ್‍ವರೆಗೂ ಹೂವು ಕೊಯ್ಲಾಗಿದೆ.

ಪ್ರತಿ ಎಕರೆಗೆ 15 ಸಾವಿರ ಸಸಿಗಳನ್ನು ನೆಡಲಾಗಿದ್ದು, ಸಸಿ ನೆಟ್ಟ 40 ದಿನಗಳ ನಂತರ ಫಸಲು ಬರಲು ಪ್ರಾರಂಭವಾಗಿದೆ. 200 ಕೆ.ಜಿ.ಯಿಂದ ಪ್ರಾರಂಭವಾದ ಹೂವಿನ ಕೊಯ್ಲು ಸದ್ಯ ಟನ್‍ ಲೆಕ್ಕಕ್ಕೆ ತಲುಪಿದೆ ಅವರು ಎಂದು ಹೇಳಿದರು. ತೋಟಕ್ಕೆ ಬಂದು ತೂಕ ಮಾಡಿಕೊಂಡು ಹೋಗಬೇಕು. ಮಾರನೇ ದಿನ ಖಾತೆಗೆ ಹಣ ಸಂದಾಯವಾಗಬೇಕು ಎಂದು ಶರಣಪ್ಪ ಅವರು ತಿಪಟೂರ ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಂದು ಕೆ.ಜಿಗೆ ₹6.50 ರಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಮುಂದಿನ ದಿನಗಳಲ್ಲಿ ಬದಲಾಗುತ್ತದೆ ಎಂದು ಶರಣಪ್ಪ ಹೇಳಿದರು.

‘ಉತ್ತಮ ಲಾಭ ಬರುವುದರಲ್ಲಿ ಸಂದೇಹವಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ರೈತರು ಚೆಂಡು ಹೂವಿನ ಬೇಸಾಯ ಮಾಡಿದ್ದಾರೆ. ಬಳಿಕ ಗಿಡಗಳನ್ನು ಕಿತ್ತು ಗುಂಡಿಗೆ ಹಾಕಿದರೆ ಟನ್‍ಗಟ್ಟಲೆ ಕಾಂಪೋಸ್ಟ್‌ ದೊರಕುತ್ತದೆ’ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಕಳಕನಗೌಡ ಪಾಟೀಲ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.