
ಹನುಮಸಾಗರ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಿದ್ದು ಸ್ಥಳೀಯರಲ್ಲಿ ಸಂತಸ ಹೆಚ್ಚಿದಷ್ಟೇ ಅಲ್ಲದೆ ಹೆಚ್ಚಿನ ಅಭಿವೃದ್ಧಿ ಆಶಾಭಾವನೆ ಮೂಡಿಸಿದೆ.
ಪಟ್ಟಣ ಪಂಚಾಯಿತಿ ಸ್ಥಾನಮಾನದಿಂದ ಹೆಚ್ಚುವರಿ ಮೂಲಸೌಕರ್ಯ ದೊರೆಯಲಿದ್ದು ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ಸಿಗಲಿದೆ. ಸ್ವಚ್ಛ ಭಾರತ್ ಮಿಷನ್ (ನಗರ), ಅಮೃತ್ ಯೋಜನೆ, ನಗರ ಬಡವರ ಪುನರ್ವಸತಿ ಯೋಜನೆ ಮುಂತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುದಾನ ಪಡೆಯಲು ಪಟ್ಟಣ ಅರ್ಹತೆ ಪಡೆದಿದೆ.
ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ಚೇತರಿಕೆ ಪಡೆಯಲಿವೆ. ಮಾರುಕಟ್ಟೆ ಅಭಿವೃದ್ಧಿ, ಶಾಪಿಂಗ್ ಸಂಕೀರ್ಣ ನಿರ್ಮಾಣ ಹಾಗೂ ಖಾಸಗಿ ಹೂಡಿಕೆ ಹೆಚ್ಚಳಕ್ಕೆ ದಾರಿ ತೆರೆದಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.
ಕೆಲ ಸವಾಲುಗಳೂ ಇದ್ದು ಆಸ್ತಿ ತೆರಿಗೆ, ವಾಣಿಜ್ಯ ಪರವಾನಗಿ ಶುಲ್ಕ ಸೇರಿದಂತೆ ನಗರ ವ್ಯಾಪ್ತಿಯ ತೆರಿಗೆ ವಿಧಿಸುವುದರಿಂದ ನಾಗರಿಕರ ಮೇಲೆ ಆರ್ಥಿಕ ಹೊರೆ ಹೆಚ್ಚಾಗುವ ಆತಂಕವೂ ಇದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ, ಭೂ ಅತಿಕ್ರಮಣ, ಸಂಚಾರ ದಟ್ಟಣೆ, ಕಸದ ನಿರ್ವಹಣೆ ಮೊದಲಾದ ಸಮಸ್ಯೆಗಳು ಆಡಳಿತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಲಿವೆ.
ನಗರ ನಿಯಮಾವಳಿಗಳಿಗೆ ಒಳಪಡುವುದರಿಂದ ಮುಖ್ಯವಾಗಿ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ ಹಾಗೂ ಭೂ ಬಳಕೆ ವರ್ಗಾವಣೆ ನಿಯಮಗಳು ಕಡ್ಡಾಯವಾಗಲಿವೆ. ಇದರಿಂದ ನಿಯಮಾನುಸಾರ ಅಭಿವೃದ್ಧಿ ಸಾಧ್ಯವಾದರೂ ಆರಂಭಿಕ ಹಂತದಲ್ಲಿ ಜನರಿಗೆ ಕೆಲ ಅಸೌಕರ್ಯಗಳು ಉಂಟಾಗುವ ಸಾಧ್ಯತೆ ಇದೆ.
ಪರಿಣಾಮಕಾರಿ ಆಡಳಿತ ಮತ್ತು ಜನಸಹಭಾಗಿತ್ವದ ಮೇಲೆ ಪಟ್ಟಣ ಪಂಚಾಯಿತಿಯ ಯಶಸ್ಸು ಅವಲಂಬಿತವಾಗಿದೆ. ಪಾರದರ್ಶಕ ಆಡಳಿತ, ಸಮರ್ಪಕ ಯೋಜನೆಗಳ ಅನುಷ್ಠಾನ ಹಾಗೂ ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ ಅಗತ್ಯ ಎಂಬ ಅಭಿಪ್ರಾಯ ಸಾರ್ವಜನಿಕರದ್ದು.
ಹನುಮಸಾಗರ ಪ.ಪಂ ಆಗಿರುವುದು ಪಟ್ಟಣದ ಅಭಿವೃದ್ಧಿಗೆ ಹೊಸ ಅವಕಾಶ. ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತದೆರೆಡ್ಡಿ ರಾಯನಗೌಡ ಪ.ಪಂ ಮುಖ್ಯಾಧಿಕಾರಿ
ಪಟ್ಟಣ ಪಂಚಾಯಿತಿಯ ಸವಾಲುಗಳು
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆಗಳ ಅನುಷ್ಠಾನ ವೈಜ್ಞಾನಿಕ ಕಸದ ವಿಲೇವಾರಿ ವ್ಯವಸ್ಥೆ ಒಳಚರಂಡಿ (ಯುಜಿಡಿ) ಜಾಲದ ವಿಸ್ತರಣೆ ಅಭಿವೃದ್ಧಿ ಉತ್ತ ರಸ್ತೆಗಳ ನಿರ್ಮಾಣ ಬೀದಿ ದೀಪಗಳ ವ್ಯವಸ್ಥೆ ಸುಧಾರಣೆ ಪಾರ್ಕ್ ಹೈಟೆಕ್ ಬಸ್ ನಿಲ್ದಾಣ ಸಾರ್ವಜನಿಕ ಮುೂತ್ರಾಲಯ / ಶೌಚಾಲಯ ನಿರ್ಮಾಣ ನಗರ ಆರೋಗ್ಯ ಕೇಂದ್ರಗಳ ಸ್ಥಾಪನೆ ಅಗ್ನಿಶಾಮಕ ಸೇವೆ ತುರ್ತು ಸೇವೆಗಳ ವ್ಯವಸ್ಥೆ
ವಾರ್ಡ್ ವಿಂಗಡಣೆ ಪ್ರಕ್ರಿಯೆಗೆ ಚಾಲನೆ
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು ಈ ಬಗ್ಗೆ ಬಿಎಲ್‌ಒಗಳ ಸಭೆ ನಡೆದಿದೆ. ಪಟ್ಟಣದಲ್ಲಿ ಒಟ್ಟು 19 ವಾರ್ಡ್‌ಗಳನ್ನು ಅಂದಾಜಿಸಲಾಗಿದ್ದು ವಿಂಗಡಣೆ ವೇಳೆ ನಕ್ಷೆಯನ್ನು ಪರಿಗಣಿಸಿ ಗಡಿ ಕಾಪಾಡುವುದು ಅತ್ಯಂತ ಮುಖ್ಯ. ಮತದಾರರು ಬೇರೆಬೇರೆ ವಾರ್ಡ್‌ಗೆ ಸೇರದಂತೆ ನೋಡಿಕೊಳ್ಳಬೇಕು. ಜನ ತಮ್ಮ ವಾರ್ಡ್‌ನಲ್ಲೇ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್‌ಒಗಳು ಸೂಕ್ತ ಯೋಜನೆ ರೂಪಿಸಬೇಕು’ ಎಂದು ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಸೂಚಿಸಿದ್ದಾರೆ. ಮುಖ್ಯ ರಸ್ತೆ ಸರ್ಕಾರಿ ಕಟ್ಟಡ ಸರ್ಕಾರಿ ಶಾಲೆಗಳಿರುವ ಪ್ರದೇಶಗಳನ್ನು ಆಧಾರಿಸಿ ಪ್ರಾಯೋಗಿಕವಾಗಿ ಸಮರ್ಪಕವಾದ ವಾರ್ಡ್ ಗಡಿಗಳನ್ನು ಗುರುತಿಸಬೇಕು. ಕ್ಷೇತ್ರ ಮಟ್ಟದಲ್ಲಿ ಸಮಗ್ರ ಸಮೀಕ್ಷೆ ನಡೆಸಿ ಗೊಂದಲ ಉಂಟಾಗದಂತೆ ಕಾರ್ಯ ಪೂರ್ಣಗೊಳಿಸಬೇಕು ಎಂದು ರೆಡ್ಡಿ ರಾಯನಗೌಡ ಹೇಳಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯಿತಿಯಾಗಿದ್ದ ಸಂದರ್ಭದಲ್ಲಿ 14 ವಾರ್ಡ್‌ಗಳಿದ್ದವು. ಈಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಹಿನ್ನೆಲೆಯಲ್ಲಿ ಜನಸಂಖ್ಯೆ ಹಾಗೂ ಮತದಾರರ ಪ್ರಮಾಣವನ್ನು ಪರಿಗಣಿಸಿ ಹೆಚ್ಚುವರಿ ವಾರ್ಡ್ ವಿಂಗಡಣೆ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಸರಾಸರಿ 800ರಿಂದ 900ರವರೆಗೆ ಮತದಾರರು ಹೊಂದಿರುವಂತೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ರೆಡ್ಡಿ ರಾಯನಗೌಡ ಹೇಳಿದರು. ವಾರ್ಡ್ ವಿಂಗಡಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿ ಮತದಾರರು ಬೇರೆ ವಾರ್ಡ್‌ಗೆ ಸೇರದಂತೆ ನೋಡಿಕೊಳ್ಳಲಾಗುತ್ತದೆ. ಜನರ ಸಹಕಾರ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯುತ ಕಾರ್ಯದಿಂದ ಹನುಮಸಾಗರವನ್ನು ಮಾದರಿ ಪಟ್ಟಣವಾಗಿ ರೂಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.