ADVERTISEMENT

ಹನುಮಸಾಗರ | ‘ಜನಸ್ಪಂದನದ ಸದುಪಯೋಗ ಪಡೆಯಿರಿ’

ಗಡಿಗ್ರಾಮ ಹನುಮನಾಳದಲ್ಲಿ ಜಿಲ್ಲಾಡಳಿತದಿಂದ ಜನಸ್ಪಂದನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:20 IST
Last Updated 9 ಅಕ್ಟೋಬರ್ 2024, 5:20 IST
ಹನುಮಸಾಗರ ಸಮೀಪದ ಹನುಮನಾಳದಲ್ಲಿ ಮಂಗಳವಾರ ನಡೆದ ಕುಷ್ಟಗಿ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು
ಹನುಮಸಾಗರ ಸಮೀಪದ ಹನುಮನಾಳದಲ್ಲಿ ಮಂಗಳವಾರ ನಡೆದ ಕುಷ್ಟಗಿ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು    

ಹನುಮಸಾಗರ: ಇಲ್ಲಿಗೆ ಸಮೀಪದ ಹನುಮನಾಳ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಕುಷ್ಟಗಿ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ 349 ಅರ್ಜಿಗಳು ಸಲ್ಲಿಕೆಯಾದವು.

ಹನುಮನಾಳ, ನಿಲೋಗಲ್, ಬಿಳೇಕಲ್, ಕಡಿವಾಲ, ಮಾಲಗತ್ತಿ, ಪಟ್ಟಲಚಿಂತಿ, ತುಗ್ಗಲದೋಣಿ, ಮಿಟ್ಟಲಕೋಡ್, ಗುಡ್ಡದದೇವಲಾಪುರ, ಜಾಹಗೀರಗುಡೂದೂರ, ನೀರಲಕೊಪ್ಪ, ಶ್ಯಾಡಲಗೇರಿ, ರಂಗಾಪುರ, ಕೊಡತಗೇರಿ, ಎಂ.ಕುರುಬನಾಳ, ಎನ್ ಬಸಾಪುರ, ಬಾದಿಮನಾಳ, ಬೊಮ್ಮನಾಳ, ಗೊರೆಬಾಳ, ತುಮರಿಕೊಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಜನಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಿದರು.

ರಸ್ತೆಗಳನ್ನು ದುರಸ್ತಿ ಮಾಡಬೇಕು, ಹದ್ದು ಬಸ್ತ್ ಮಾಡಬೇಕು, ದಾರಿ ಸಮಸ್ಯೆ ಬಗೆಹರಿಸಬೇಕು, ಹೊಸದಾಗಿ ಪಡಿತರ ಕಾರ್ಡ್‌ ವಿತರಿಸಬೇಕು, ಪಿಎಂ ಕಿಸಾನ್ ಯೋಜನೆಯ ವಿಮಾ ಹಣ ಮಂಜೂರಿ ಮಾಡಬೇಕು ಎನ್ನುವಂತಹ ನಾನಾ ಬೇಡಿಕೆಗಳ ಅರ್ಜಿಗಳು ಬಂದಿದ್ದವು.

ADVERTISEMENT

ಜಿಲ್ಲಾಧಿಕಾರಿ ನಲಿನ್ ಅತುಲ್ ಬೆಳಿಗ್ಗೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಆಡಳಿತವು ಜನರ ಮನೆಬಾಗಿಲಿಗೆ ಹೋಗಬೇಕು ಎಂಬುದು ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತದಿಂದ ವಿವಿಧ ತಾಲ್ಲೂಕುಗಳಲ್ಲಿ ಜನಸ್ಪಂದನ ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಹನುಮನಾಳ ಗ್ರಾಮಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು,  ಹನುಮನಾಳ ಮತ್ತು ಹನುಮಸಾಗರ ಈ ಎರಡೂ ಹೋಬಳಿ ಸೇರಿಸಿ ಹನುಮನಾಳ ಹೋಬಳಿಯನ್ನು ನೂತನ ತಾಲ್ಲೂಕು ಘೋಷಣೆ ಮಾಡಬೇಕು. ಕುಷ್ಟಗಿ ತಾಲ್ಲೂಕು ಕೊಪ್ಪಳ ಉಪವಿಭಾಗದ ವ್ಯಾಪ್ತಿಯಲ್ಲಿಯೇ ಮುಂದುವರೆಸಬೇಕು ಎನ್ನುವ ಬೇಡಿಕೆಗಳು ಸಲ್ಲಿಕೆಯಾದವು.

ಜೆಜೆಎಂ ಪೈಪುಗಳ ನಲ್ಲಿಗಳ ಜೋಡಣೆ ಮಾಡಬೇಕು ಎಂದು ಹನುಮನಾಳ ಗ್ರಾಮದ ಎರಡನೇ ವಾರ್ಡ್‌ ನಿವಾಸಿಗಳು ಮನವಿ ಮಾಡಿದರು. ಕಲಾವಿದರ ಮಾಸಾಶನ ಮಂಜೂರು ಮಾಡಬೇಕು ಎಂದು ಜಾನಪದ ಮತ್ತು ರಿವಾಯಿತ ಕಲಾವಿದ ಮುದುಕಪ್ಪ ಶಾಂತಗೇರಿ ಅವರು ಮನವಿ ಮಾಡಿದರು.

ಹನುಮನಾಳ ಗ್ರಾಮದಲ್ಲಿನ ಪರಿಶಿಷ್ಟ ಜಾತಿ ಸಮುದಾಯ ಭವನ ಕಳಪೆ ಕಾಮಗಾರಿಯಾಗಿದೆ ಎಂದು ಹನುಮನಾಳ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರಾದ ಯಮನೂರಪ್ಪ ಹಾಗೂ ಇತರರು ಜಿಲ್ಲಾಧಿಕಾರಿಗೆ ದೂರು ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಹನುಮನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತೆವರಪ್ಪ ಚಿಕ್ಕನಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜು ತಳವಾರ, ತಹಶೀಲ್ದಾರ್‌ ಅಶೋಕ ಶಿಗ್ಗಾಂವಿ, ತಾ.ಪಂ. ಇಒ ಪಂಪಾಪತಿ, ಉಪ ತಹಶೀಲ್ದಾರ್‌ ಆಂಜನೇಯ ಮಸರಕಲ್, ಹನುಮನಾಳ ಹೋಬಳಿ ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹನುಮನಾಳಕ್ಕೆ ಪದವಿ ಕಾಲೇಜು ಮಂಜೂರು ಮಾಡಲು ಆಗ್ರಹ ರಸ್ತೆಗಳನ್ನು ದುರಸ್ತಿ ಮಾಡಲು ಮನವಿಗಳ ಸಲ್ಲಿಕೆ ಪಿಎಂ ಕಿಸಾನ್ ಯೋಜನೆಯ ವಿಮಾ ಹಣ ಮಂಜೂರಿ ಮಾಡಲು ಒತ್ತಾಯ

ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಸರ್ಕಾರ ತಾಲ್ಲೂಕು ಹಂತದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.

-ನಲಿನ್‌ ಅತುಲ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.