ADVERTISEMENT

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

ಹಾಥರಸ್‌ ಘಟನೆ: ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 11:22 IST
Last Updated 6 ಅಕ್ಟೋಬರ್ 2020, 11:22 IST
ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು   

ಗಂಗಾವತಿ: ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಈಚೆಗೆ ನಡೆದ ಅತ್ಯಾಚಾರ ಘಟನೆ ಖಂಡಿಸಿ, ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮಾಜದ ಹಿರಿಯ ಮುಖಂಡ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ,‘ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಯುವತಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆಗೆ ಸರ್ಕಾರ ನ್ಯಾಯ ಒದಗಿಸಬೇಕು. ತಪ್ಪಿತಸ್ಥರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಮಹಿಳೆಯರು ಸ್ವತಂತ್ರವಾಗಿ ಬದುಕಲು ಆಗುತ್ತಿಲ್ಲ. ಹಾಗಾಗಿ ದೇಶದಲ್ಲಿ ವಿಶೇಷ ತಂಡ ರಚಿಸಿ ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರಪ್ರದೇಶದಲ್ಲಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ವೀರಭದ್ರಪ್ಪ ನಾಯಕ ಮಾತನಾಡಿ,‘ಉತ್ತರಪ್ರದೇಶದಲ್ಲಿ ಪರಿಶಿಷ್ಟ ಜಾತಿ ಯುವತಿ ಮೇಲೆ ನಡೆದ ದೌರ್ಜನ್ಯ ಅಮಾನವೀಯ. ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ವಾಲ್ಮೀಕಿ ಸರ್ಕಲ್‌ನಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಜಾಥಾ ನಡೆಸಿ, ಮಾನವ ಸರಪಳಿ ನಿರ್ಮಿಸಲಾಯಿತು. ಯುಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಂತರ ಉಪತಹಶೀಲ್ದಾರ್‌ ಮಂಜುನಾಥ ನಂದನ್‌ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಪ್ರಮುಖರಾದ ಹನುಮಂತಪ್ಪ ನಾಯಕ, ಬಿ.ಕೃಷ್ಣಪ್ಪ, ಬಸಪ್ಪ ನಾಯಕ, ಚೌಡ್ಕಿ ಹನುಮಂತಪ್ಪ, ಮಲ್ಲೇಶಪ್ಪ ನಾಯಕ, ರಮೇಶ ಚೌಡ್ಕಿ, ಯಮನೂರ ಚೌಡ್ಕಿ, ಅಮರೇಶ್‌, ರಮೇಶ ಪೂಜಾರಿ, ಪಂಪಣ್ಣ ನಾಯಕ, ರಾಮಣ್ಣ ಬಳ್ಳಾರಿ, ಯಂಕಪ್ಪ ತಳವಾರ ಹಾಗೂ ಹೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.