ADVERTISEMENT

‘ಗುಲಾಬಿ ಹೂ’ ನೀಡಿ ತಂಬಾಕು ಜಾಗೃತಿ

ಗಂಗಾವತಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ‘ಗುಲಾಬಿ ಆಂದೋಲನ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 14:22 IST
Last Updated 9 ಡಿಸೆಂಬರ್ 2020, 14:22 IST
ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಲಾಯಿತು
ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಲಾಯಿತು   

ಗಂಗಾವತಿ: ‘ತಂಬಾಕು ಉತ್ಪನ್ನಗಳ ಸೇವನೆ ಮಾರಣಾಂತಿಕ ರೋಗಕ್ಕೆ ಕಾರಣವಾಗುತ್ತಿದೆ. ಯುವಜನರು ಇದಕ್ಕೆ ಬಲಿಯಾಗುತ್ತಿರುವುದು ಖೇದಕರ ಸಂಗತಿ’ ಎಂದು ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಮಹೇಶ್ ಎಂ.ಜಿ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಗುಲಾಬಿ ಆಂದೋಲನ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಗತ್ತಿನಲ್ಲಿ ಪ್ರತಿ 8 ಸೆಕೆಂಡಿಗೆ ತಂಬಾಕು ಸೇವನೆಯಿಂದ ಒಬ್ಬರು ಮರಣ ಹೊಂದುತ್ತಿದ್ದಾರೆ. ಇದರಿಂದ ಅನೇಕ ಸಂಸಾರಗಳು ಬೀದಿಗೆ ಬಂದಿವೆ. ಅನೇಕ ಜನರಲ್ಲಿ ಕ್ಯಾನ್ಸರ್ ಹಾಗೂ ಕ್ಷಯ ಮತ್ತು ಅಸ್ತಮಾದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಜಿಲ್ಲೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ತಂಬಾಕು ಚಟಗಳಿಗೆ ದಾಸರಾದವರು ಅದರಿಂದ ಮುಕ್ತಿ ಹೊಂದಲು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ,‘ಇದೊಂದು ರಾಷ್ಟ್ರ ಮಟ್ಟದ ವಿಶೇಷ ಆಂದೋಲನ. ನಗರದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

ಜಿಲ್ಲಾ ತಂಬಾಕು ಘಟಕದ ಮನಶಾಸ್ತ್ರಜ್ಞೆ ಶಾಂತ ಕಟ್ಟಿಮನಿ, ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆ ಜ್ಯೋತಿ ಕಿತ್ತೂರು ಮಾತನಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ತಂಬಾಕು ಸೇವನೆ ಮಾಡುವವರಿಗೆ ಗುಲಾಬಿ ಹೂ ನೀಡುವ ಮೂಲಕ ತಂಬಾಕು ಸೇವನೆ ನಿಲ್ಲಿಸುವಂತೆ ಜಾಗೃತಿ ಮೂಡಿಸಲಾಯಿತು.

ಯಲಬುರ್ಗಾ ತಾಲ್ಲೂಕು ಆರೋಗ್ಯಾಧಿಕಾರಿ ಮಂಜುನಾಥ್, ಉಪವಿಭಾಗ ಆಸ್ಪತ್ರೆಯ ಸಿಬ್ಬಂದಿಗಳಾದ ಡಾ.ನಾಗರಾಜ್, ಭಾನುಪ್ರಕಾಶ್, ಮಲ್ಲಿಕಾರ್ಜುನ್, ದಾನನ ಗೌಡ, ಶಿವಾನಂದ, ಸ್ಯಾಮ್ ವೆಲ್, ರಾಜೀವ್, ಅಕ್ಬರ್, ನಾಗರಾಜ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.