ADVERTISEMENT

ಅಂಜನಾದ್ರಿ ಬೆಟ್ಟ ಏರುವಾಗ ಹೃದಯಾಘಾತ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 13:58 IST
Last Updated 29 ಜನವರಿ 2025, 13:58 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿಯಲ್ಲಿ ದೇವರ ದರ್ಶನಕ್ಕಾಗಿ ಬೆಟ್ಟದ ಮೆಟ್ಟಿಲು ಏರುತ್ತಿದ್ದ ಬಾಲಕನೊಬ್ಬ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾನೆ.

ಕೊಪ್ಪಳ ತಾಲ್ಲೂಕಿನ ಹುಲಗಿ ಗ್ರಾಮದ ಜಯೇಶ ಯಾದವ್ (17) ಮೃತ ಬಾಲಕ. ಇವರು ಕೊಪ್ಪಳದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಾಲಿಬಾಲ್ ತರಬೇತುದಾರ ಸುರೇಶ ಯಾದವ್ ಅವರ ಮಗನಾಗಿದ್ದಾನೆ ಎಂದು ತಿಳಿದು ಬಂದಿದೆ.

‘ಅಮಾವಾಸ್ಯೆ ಅಂಗವಾಗಿ ದೇವರ ದರ್ಶನ ಪಡೆಯಲು ಸ್ನೇಹಿತರೊಂದಿಗೆ ಬೆಟ್ಟ ಏರುವಾಗ ಮಧ್ಯಾಹ್ನ 3.15 ಗಂಟೆ ವೇಳೆಗೆ ಬೆಟ್ಟದ ತುದಿ ಬಳಿ (470ರಿಂದ 480 ಮೆಟ್ಟಿಲು) ಏಕಾಏಕಿ ಸುಸ್ತು ಕಾಣಿಸಿಕೊಂಡು ಜಯೇಶ್‌ ಅಸ್ವಸ್ಥಗೊಂಡಿದ್ದ. ತಕ್ಷಣವೇ ಆನೆಗೊಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು. ಅಲ್ಲಿನ ವೈದ್ಯರು ಗಂಗಾವತಿಗೆ ಕರೆದೊಯ್ಯುವಂತೆ ಸೂಚಿಸಿದರು. ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದರು’ ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು ಹೇಳಿದರು.

ADVERTISEMENT

‘ಬಾಲಕ ಅಸ್ವಸ್ಥಗೊಂಡ ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಆದರೆ, ಆಕ್ಸಿಜನ್ ಕೊರತೆಯಿದೆ ಎಂದು ಸಬೂಬು ಹೇಳಿ ಗಂಗಾವತಿಯ ಆಂಬುಲೆನ್ಸ್‌ ಸಿಬ್ಬಂದಿ ಸ್ಥಳಕ್ಕೆ ಬರಲೇ ಇಲ್ಲ. ಬಳಿಕ ಆನೆಗೊಂದಿ ಪ್ರಾಥಮಿಕ ಆರೋಗ್ಯದ ಕೇಂದ್ರದ ವಾಹನದಲ್ಲೇ ಕರೆದುಕೊಂಡು ಹೋಗಲಾಯಿತು’ ಎಂದು ದೇವಸ್ಥಾನದ ಸಿಬ್ಬಂದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.