ADVERTISEMENT

ಕೊಪ್ಪಳ: ಉತ್ತಮ ಮಳೆ, ಕೃಷಿ ಹೊಂಡಗಳಿಗೆ ನೀರು

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ಗ್ರಾಮೀಣ ಭಾಗದಲ್ಲಿ ವ್ಯಾಪಕ ಮಳೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:37 IST
Last Updated 20 ಮೇ 2022, 4:37 IST
ಕೊಪ್ಪಳದ ಗಡಿಯಾರ ಕಂಬದ ಬಳಿ ಸುರಿವ ಬಿರುಸು ಮಳೆಯಲ್ಲಿಯೇ ಕೊಡೆ ಹಿಡಿದು ಹೊರಟ ಬೈಕ್ ಸವಾರಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳದ ಗಡಿಯಾರ ಕಂಬದ ಬಳಿ ಸುರಿವ ಬಿರುಸು ಮಳೆಯಲ್ಲಿಯೇ ಕೊಡೆ ಹಿಡಿದು ಹೊರಟ ಬೈಕ್ ಸವಾರಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಜಿಲ್ಲೆಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಬಿಟ್ಟು,ಬಿಟ್ಟ ಬಂದ ಮಳೆ, ಮಧ್ಯಾಹ್ನ ಎಡಬಿಡದೇ ಸುರಿಯಿತು.ಬಿಸಿಲಿನ ತಾಪದಿಂದ ಪರಿತಪಿಸುತ್ತಿದ್ದ ಜನರಿಗೆ ಮಳೆರಾಯ ತಂಪು ಮೂಡಿಸಿದ.

ಗ್ರಾಮೀಣ ಭಾಗದಲ್ಲಿ ಬುಧವಾರ ಇಡೀ ರಾತ್ರಿ ಮಳೆಯಾಗಿದ. ಅಳವಂಡಿ ಹೋಬಳಿಯ ಹಿರೇಶಿಂಧೋಗಿ, ಕವಲೂರು ಭಾಗದಲ್ಲಿವ್ಯಾಪಕ ಮಳೆಯಾಗಿದೆ. ಮಳೆಯಿಂದ ಸುತ್ತಲಿನ ಹಳ್ಳಗಳಲ್ಲಿ ನೀರು ಹರಿದಿದ್ದು, ಹೊಲಗಳಲ್ಲಿನ ಕೃಷಿ ಹೊಂಡಗಳಿಗೆ ನೀರು ಬಂದಿದೆ.

ಜಿಲ್ಲೆಯ ಕುಕನೂರು, ಯಲಬುರ್ಗಾ, ಗಂಗಾವತಿ, ಕುಷ್ಟಗಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಕಡು ಬೇಸಿಗೆಯ ಈ ದಿನದಲ್ಲಿ 2.0 ಮಿಮೀ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಈಗ 14 ಮಿಮೀ ಮಳೆಯಾಗಿದೆ. ತಗ್ಗು ಪ್ರದೇಶ ಸೇರಿದಂತೆ ನಗರದಲ್ಲಿ ಕೂಡಾ ಮಳೆಯ ನೀರು ಹರಿದಾಡಿತು.

ADVERTISEMENT

ಕೇರಳಕ್ಕೆ ಮುಂಗಾರು ಹಂಗಾಮಿನ ಮಳೆ ಕಾಲಿಟ್ಟಿದ್ದು, ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಮೋಡಕವಿದು ರಾತ್ರೀಯಿಡಿ ಮಳೆಯಾಗುವ ಮುನ್ಸೂಚನೆ ಇದೆ. ಅಲ್ಲದೆ ಮೂರು ದಿನ ಇದೇ ರೀತಿ ವಾತಾವರಣ ಇರಲಿದೆ ಎಂದು ಹವಾಮಾನ ತಜ್ಞರು ಸೂಚನೆ ನೀಡಿದ್ದಾರೆ.

ಜಲಾಶಯಕ್ಕೆ ನೀರು:ಇಲ್ಲಿನ ಮುನಿರಾಬಾದಿನ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ 13.14 ಅಡಿ ಟಿಎಂಸಿ ನೀರು ಲಭ್ಯವಿದ್ದು, ಕುಡಿಯುವ ನೀರಿಗೆ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದೇ ನಿರಾಳತೆ ಮೂಡಿಸಿದೆ.

100 ಟಿಎಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 12 ಟಿಎಂಸಿ ನೀರು ಇದೆ. ಕಾಲುವೆಗೆ ನಿತ್ಯ 200 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ. ಹೊರಹರಿವು301ಕ್ಯೂಸೆಕ್ ಇದ್ದು, 3126ಕ್ಯೂಸೆಕ್ ಒಳಹರಿವು ಇದೆ. ಪಶ್ಚಿಮಘಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ನೀರು ಸಂಗ್ರಹವಾಗುತ್ತದೆ.

ಸತತ ಮೂರು ವರ್ಷಗಳ ಹಿಂದೆ ಜಲಾಶಯದಲ್ಲಿ ಮಾರ್ಚ್ ಅಂತ್ಯಕ್ಕೆ 5 ಟಿಎಂಸಿ ನೀರು ಇತ್ತು. ಇದರಿಂದ ಎರಡನೇ ಬೆಳೆಗೆ ನೀರು ದೊರೆಯದೇ ನಿರಂತರ ರೈತರ ಹೋರಾಟಗಳು ನಡೆದಿದ್ದವು. ಕಳೆದ ವರ್ಷ ಇದೇ ಸಂದರ್ಭದಲ್ಲಿ 5.32 ಟಿಎಂಸಿ ನೀರು ಇತ್ತು.

ಈಗಾಗಲೇ ಬೇಸಿಗೆ ಬೆಳೆ ಕೊಯ್ಲಿಗೆ ಬಂದಿದ್ದು, ನೀರಾವರಿ ಉದ್ದೇಶಕ್ಕೆ ನೀರನ್ನು ಬಂದ್ ಮಾಡಲಾಗಿದೆ. ಕುಡಿಯುವ ನೀರಿನ ಬಳಕೆಗೆ ಮಾತ್ರ ಬಿಡಲಾಗುತ್ತಿದೆ.ಮೇ ಅಂತ್ಯಕ್ಕೆ ಕಾಲುವೆ ನೀರನ್ನು ಬಂದ್ ಮಾಡಲಾಗುತ್ತಿದ್ದು ಜೂನ್ 1ರಿಂದ 20ರವರೆಗೆ
ಕಾಲುವೆಗೆ ನೀರನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಸಣ್ಣಪುಟ್ಟ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಭತ್ತ ಬೆಳೆಗಾರರಿಗೆ ತೊಂದರೆ: ಮಳೆಯಿಂದ ಕೊಯ್ಲು ಮಾಡಿದ ಭತ್ತ ಮತ್ತು ಕೊಯ್ಲಿಗೆ ಬಂದ ಹಾಳಾಗಿದೆ. ಒಣಗಿಸಲು ಹಾಕಿದ್ದ ಭತ್ತದ
ರಾಶಿಗಳಿಗೆ ನುಗ್ಗಿದ್ದು, ರೈತರು ಗೋಳಾಡುವಂತೆ ಆಗಿದೆ. ಮಾವು ಮಾರುಕಟ್ಟೆಗೆ ಬರುವ ಮೊದಲೇ ಮಳೆ, ಗಾಳಿಗೆ ಸಿಲುಕಿದೆ. ಇದರಿಂದ ಹೆಚ್ಚಿನ ಮತ್ತು ಗುಣಮಟ್ಟದ ಮಾವು ಮಾರುಕಟ್ಟೆಗೆ ಬರುತ್ತಿಲ್ಲ.

ದ್ರಾಕ್ಷಿ ಬೆಳೆ ಇಳುವರಿ ಕಡಿಮೆಯಾಗಿದ್ದು, ಕೆಜಿ 100 ರಂತೆ ಮಾರಾಟವಾಗುತ್ತಿದೆ. ಕೆಜಿಗೆ 50ಕ್ಕೆ ದೊರೆಯುತ್ತಿದ್ದ ದ್ರಾಕ್ಷಿ ಈಗ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅಲ್ಲದೆ ತೋಟಗಾರಿಕೆ ಬೆಳೆಗಳು ಮಳೆಯ ಹೊಡೆತಕ್ಕೆ ಸಿಲುಕಿವೆ. ಅವಧಿಪೂರ್ವದಲ್ಲಿಯೇ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಮಳೆ ಕ್ಷೀಣಿಸಲಿದೆ ಎಂಬುವುದು ರೈತರ ಆತಂಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.