ಯಲಬುರ್ಗಾ: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ವಿವಿಧ ಗ್ರಾಮಗಳ ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಅಕ್ಕಪಕ್ಕದ ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿದ್ದು ವರದಿಯಾಗಿದೆ.
ಕೆಲವೊಂದು ಗ್ರಾಮದ ಮಣ್ಣಿನ ಮನೆಗಳ ಗೋಡೆಗಳು ಕುಸಿದ ಪರಿಣಾಮ ಗಾಯಗಳಾದ ಘಟನೆ ಜರುಗಿದೆ. ಶನಿವಾರ ಸಂಜೆವರೆಗೂ ಮಳೆಯು ನಿಂತಿದ್ದು, ಮೋಡಕವಿದ ವಾತಾವರಣ ಮುಂದುವರೆದಿತ್ತು.
ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಮೂರು ಮನೆಗಳು ಕುಸಿದಿವೆ. ಮನೆ ಕುಸಿದು ಎರಡು ವರ್ಷದ ಲಿಂಗರಾಜ ಎಂಬಾತನಿಗೆ ಬಲವಾದ ಗಾಯವಾಗಿದ್ದು, ಬಾಲಕರ ತಂದೆ ಬಸವರಾಜ ಹಂಚಿನಾಳ ಹಾಗೂ ಪತ್ನಿಗೂ ಗಾಯವಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ತಿಪ್ಪಣ್ಣ ಬಾಳಪ್ಪ ದೇವಕ್ಕಿ, ಜನ್ನತ್ತಬಿ ಮಮ್ಮದ್‍ಸಾಬ ನೂರಬಾಷ ಅವರಿಗೆ ಸೇರಿದ ಮನೆಗಳು ಕುಸಿದಿವೆ. ಯಾವುದೇ ತೊಂದರೆಗಳಾಗಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಗೌಡ ಮೂಲಿಮನಿ ಗ್ರಾಮ ಆಡಳಿತ ಅಧಿಕಾರಿ ದೇವರಾಜ, ಗ್ರಾಮ ಸಹಾಯಕ ಮಹಾಂತೇಶ ಪುರ್ತಗೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಪರಿಹಾರ ನೀಡುವಂತೆ ಸಂತ್ರಸ್ಥ ಕುಟುಂಬದ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಶಿಡ್ಲಭಾವಿ ಊರಿನಹಳ್ಳ ಭರ್ತಿಯಾಗಿದ್ದು ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ತುಂಬಿ ಹರಿಯುತ್ತಿದೆ. ರೈತರು ಜಮೀನುಗಳಿಗೆ ಹೋಗಿಬರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ರಸ್ತೆಯ ಮೇಲೆಯೇ ಹರಿಯುವುದರಿಂದ ಅಕ್ಕಪಕ್ಕದ ಊರುಗಳಿಗೂ ಹೋಗುವುದು ಕಷ್ಟವಾಗುತ್ತಿದೆ. ಈ ಕಾರಣದಿಂದ ಹಳ್ಳಕ್ಕೆ ಸೇತುವೆ ನಿರ್ಮಿಸುವುದು ಅಗತ್ಯವಿದೆ ಎಂದು ಗ್ರಾಮದ ಶರಣಪ್ಪ ಬೊಮ್ಮಸಾಲ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.