ADVERTISEMENT

ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಹಾಯ ಕಲ್ಪಿಸಲಾಗುವುದು: ಶಾಸಕ ಬಸವರಾಜ

ಉಪ ಚುನಾವಣೆ ನಂತರ ಕನಕಗಿರಿ ಉತ್ಸವ ಆಚರಣೆಗೆ ಸಿದ್ದತೆ: ದಢೇಸೂಗೂರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 9:51 IST
Last Updated 28 ನವೆಂಬರ್ 2019, 9:51 IST
ಕನಕಗಿರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಶಾಸಕ ಬಸವರಾಜ ಧಡೇಸೂಗೂರು ಉದ್ಘಾಟಿಸಿದರು
ಕನಕಗಿರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಶಾಸಕ ಬಸವರಾಜ ಧಡೇಸೂಗೂರು ಉದ್ಘಾಟಿಸಿದರು   

ಕನಕಗಿರಿ: ನೂತನ ತಾಲ್ಲೂಕಿನಲ್ಲಿ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಇದೆ. ಭಾಷೆ, ನೆಲ, ಜಲ ರಕ್ಷಣೆಯ ವಿಚಾರದಲ್ಲಿ ಒಂದಾಗಿ ಹೋರಾಟ ನಡೆಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ನಂತರ ಕನಕಗಿರಿ ಉತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುವುದು ಎಂದು ತಿಳಿಸಿದರು.ದೇವಸ್ಥಾನ, ಮಸೀದಿ ನಿರ್ಮಾಣ ಮಾಡುವ ಬದಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ADVERTISEMENT

‌ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾ ರಮೇಶ ನಾಯಕ ಮಾತನಾಡಿ,ನೆರೆ ಸಂತ್ರಸ್ತರಿಗೆ ನೆರವಾಗುವ ಮೂಲಕ ಇಲ್ಲಿನ ಕಸಾಪ ಘಟಕ ಸಾಮಾಜಿಕ ಕಳಕಳಿ ಮೆರೆದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಮಾತನಾಡಿ, ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಮಾತೃಭಾಷೆ ಪ್ರೇಮ ಮರೆಯಬಾರದು ಎಂದು ಹೇಳಿದರು.

ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ, ಸಾಹಿತ್ಯದ ಚಟುವಟಿಕೆಗಳ ಜತೆಗೆ
ಶಿಕ್ಷಣ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಪಟ್ಟಣ ಪಂಚಾಯಿತಿ ಸದಸ್ಯ ಶರಣಬಸಪ್ಪ ಭತ್ತದ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಅಂಗಡಿ, ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ
ಮಾತನಾಡಿದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲ್ಲೂಕಿನ ವಿದ್ಯಾರ್ಥಿಗಳು ಹಾಗೂ ಕನ್ನಡ ಶಿಕ್ಷಕರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ, ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಹುಲಗಪ್ಪ ವಾಲೇಕಾರ, ಕವಿತಾ ಹಾದಿಮನಿ, ಸರಸ್ವತಿ ಕನಕಪ್ಪ, ರವಿ ಭಜಂತ್ರಿ, ಸುಭಾಸ, ಪ್ರಾಂಶುಪಾಲ ಬಸವರಾಜ ಬಡಿಗೇರ, ಎಪಿಎಂಸಿ ಮಾಜಿ ಅಧ್ಯಕ್ಷ ಡಾ ಅರವಟಗಿಠ, ಮಾಜಿ ನಿರ್ದೇಶಕ ವಾಗೀಶ ಹಿರೇಮಠ, ಕೊಪ್ಪಳ ತಾಲ್ಲೂಕು ಕಸಾಪ ಅಧ್ಯಕ್ಷ ಚೆನ್ನಬಸಪ್ಪ ಕಡ್ಡಿಪುಡಿ, ವಿರುಪಣ್ಣ ಕಲ್ಲೂರು ಇದ್ದರು. ಸಾಹಿತಿ ಚೆನ್ನಣ್ಣ ವಾಲೀಕಾರಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಭುಲಿಂಗ ವಸ್ತ್ರದ ಸ್ವಾಗತಿಸಿದರು. ಇಮಾಮಸಾಹೇಬ್ ನಿರೂಪಿಸಿದರು. ಪರಸಪ್ಪ ಹೊರಪೇಟೆ
ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.