ಕಾರಟಗಿ: ಪಟ್ಟಣದ ಪ್ರತಿಭೆಗಳೇ ನಿರ್ಮಿಸಿರುವ ‘ಹೇಳು ಯಾಕೆ?’ ಚಲನಚಿತ್ರ ಮಾ.22ರಂದು ಪಟ್ಟಣದ ಪದ್ಮಾವತಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಚಲನಚಿತ್ರದ ಪೋಸ್ಟರ್‌ಗಳನ್ನು ಯುವ ಪ್ರತಿಭೆಗಳು ಬುಧವಾರ ಬಿಡುಗಡೆಗೊಳಿಸಿದರು.
ಅನಿಲ್‌ಕುಮಾರ್ ಮತ್ತು ಕೃಷ್ಣ ಮೇಗೂರು ನಿರ್ಮಾಣದ ಚಲನಚಿತ್ರಕ್ಕೆ ನಾಯಕ ನಟನಾಗಿ ಪಟ್ಟಣದ ಶರಣ ಬಿಜಕಲ್ ನಟಿಸಿದ್ದಾರೆ. ನಟಿಯಾಗಿ ದಿವ್ಯಶ್ರೀ ಬೆಂಗಳೂರು ಜೋಡಿಯಾಗಿದ್ದಾರೆ.
ನಾಯಕ ನಟ, ನಿರ್ದೇಶಕ ಶರಣ ಬಿಜಕಲ್ ಮಾತನಾಡಿ, ‘ಚಿತ್ರದಲ್ಲಿಯ ಎಲ್ಲ ಕಲಾವಿದರು, ತಂತ್ರಜ್ಞರು ಭತ್ತದ ಕಣಜದ ಪ್ರತಿಭೆಗಳೇ ಆಗಿದ್ದಾರೆ. ಕಾಲ್ಪನಿಕ ಕಥೆ, ಎಮೋಷನಲ್ ಲವ್ ಸ್ಟೋರಿಯನ್ನು ಇಟ್ಟುಕೊಂಡು ಯುವಕ- ಯುವತಿಯ ನಡುವಿನ ಪ್ರೀತಿ, ಪ್ರೇಮ, ಸ್ನೇಹದ ಕಥೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರಪ್ರೇಮಿಗಳು ನಮ್ಮ ಚಲನಚಿತ್ರವನ್ನು ನೋಡಿ, ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.
ನಿರ್ಮಾಪಕರಾದ ಅನೀಲಕುಮಾರ ಹಾಗೂ ಕೃಷ್ಣ ಮೇಗೂರು ಮಾತನಾಡಿ, ‘ಸ್ಥಳೀಯ ಪ್ರತಿಭಾವಂತರಾದ ಶರಣ ಬಿಜಕಲ್, ಚನ್ನುಗೌಡ, ವೀರೇಶ ಕತ್ತಿ, ಶರಣಪ್ಪ ಬುಕ್ಕನಟ್ಟಿ, ಮುಸ್ತಾಪಾ, ಮಂಜುನಾಥ್ ಮಂಗಳೂರು, ವಿಶ್ವನಾಥ್ ಪತ್ತಾರ, ವೆಂಕಿ, ಶರಣು ಅಪ್ಪು, ತಿಮ್ಮಣ್ಣ, ಸಾತ್ವಿಕ್ ಹಿರೇಮಠ, ಲೀಲಾವತಿ, ಶೃತಿ, ಅನಿಲ್‌ಕುಮಾರ್, ಮೂರ್ತಿ, ವೆಂಕಟೇಶ್, ನಂದಕುಮಾರ್, ಭರತ್, ಕಾರ್ತಿಕೇಯ ಚಿತ್ರದಲ್ಲಿದ್ದಾರೆ. ಒಂದೂವರೆ ತಾಸಿನ ಚಲನಚಿತ್ರ ಇದಾಗಿದ್ದು, ಒಂದೂವರೆ ವರ್ಷದಿಂದ ಕಾರಟಗಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ರಾಗಸಂಯೋಜನೆ ವಿರಾಗ್ ಬೆನಕನಾಳ, ಹಿನ್ನೆಲೆ ಸಂಗೀತ ಫಯಾಜ್ ಕುಷ್ಟಗಿ, ಸಂಕಲನ ಸಮೀರ್ ಕುಲಕರ್ಣಿ, ಛಾಯಾಗ್ರಹಣ ಅಶೋಕ್ ಕಾಶೆಟ್ಟಿಯವರದ್ದಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.