ADVERTISEMENT

ಕುಕನೂರು: ಹಿಂದೂ–ಮುಸ್ಲಿಂ ಸೌಹಾರ್ದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 6:14 IST
Last Updated 15 ಜುಲೈ 2024, 6:14 IST
ಕುಕನೂರಿನ ಬಸ್ ನಿಲ್ದಾಣದಲ್ಲಿ ಅಳ್ಳಳ್ಳಿ ಬಳ್ಳೊಳ್ಳಿ ವೇಷಧಾರಿಗಳಾದ ಮಕ್ಕಳು
ಕುಕನೂರಿನ ಬಸ್ ನಿಲ್ದಾಣದಲ್ಲಿ ಅಳ್ಳಳ್ಳಿ ಬಳ್ಳೊಳ್ಳಿ ವೇಷಧಾರಿಗಳಾದ ಮಕ್ಕಳು   

ಕುಕನೂರು: ಮೊಹರಂ ಆಚರಣೆಯು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಜತೆಗೆ ಹಿಂದೂ–ಮುಸ್ಲಿಮರ ಸೌಹಾರ್ದ ಹಾಗೂ ಭಾವೈಕ್ಯದ ಸಂಗಮವಾಗಿದೆ. ಕೆಲಸ ಅರಸಿ ನಗರಗಳಿಗೆ ವಲಸೆ ಹೋಗಿರುವವರೂ ಹರಕೆ ತೀರಿಸುವುದಕ್ಕಾಗಿ ಗ್ರಾಮಗಳತ್ತ ವಾಪಸಾಗುತ್ತಿದ್ದಾರೆ.

ಉತ್ತರ ಕರ್ನಾಟಕದ ಭಾಗದಲ್ಲಿ ಮೊಹರಂ ಆಚರಣೆ ವಿಶಿಷ್ಟವಾಗಿರುತ್ತದೆ. ಹಿಂದುಗಳೇ ಹೆಚ್ಚು ಪಾಲ್ಗೊಳ್ಳುತ್ತಾರೆ.

ಮೊಹರಂ ಆಚರಣೆಯಲ್ಲಿ ಅಲಾಯಿ ದೇವರನ್ನು ಭಕ್ತಿಯಿಂದ ಆರಾಧಿಸಿ, ಕೂಡಿಸುತ್ತಾರೆ.  ಹೊಳೆಗೆ ಕಳುಹಿಸುವವರೆಗೂ ಒಂದಿಲ್ಲೊಂದು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಪ್ರತಿ ಗ್ರಾಮದ ಮೂರ್‍ನಾಲ್ಕು ಕಡೆಗಳಲ್ಲಿ ಕೂಡಿಸಿಲಾಗಿರುವ ಅಲಾಯಿ ದೇವರು ಬರುವ ಭಕ್ತರನ್ನು ಆಶೀರ್ವದಿಸುತ್ತಿವೆ.

ADVERTISEMENT

ಮೊಹರಂ ಕೊನೆ ದಿನದವರೆಗೆ ಅಂದರೆ ಗುದ್ದಲಿ ಹಾಕಿದ ದಿನದಿಂದ ಕಳ್ಳಳ್ಳಿ, ಹುಲಿ, ಕರಡಿ ವೇಷಧಾಧಾರಿಗಳ ಹಳ್ಳಿ ಹಳ್ಳಿಗಳಲ್ಲಿ ಸುತ್ತುವ ಮೂಲಕ ಭಕ್ತರು ಕೊಡುವ ಧಾನ್ಯ, ಹಣವನ್ನು ಸಂಗ್ರಹಿಸಿಕೊಂಡು ಅಂತಿಮ ದಿನ ವಿಶೇಷ ಪೂಜೆ ಸಲ್ಲಿಸಿ, ತಮ್ಮ ವೇಷದಿಂದ ತ್ಯಜಿಸುತ್ತಾರೆ.

ಮಕ್ಕಳು ಹಾಗೂ ಯುವಕರು ದೇಹಕ್ಕೆ ಹಾಗೂ ಮುಖಕ್ಕೆ ಕಪ್ಪು ಮಸಿ ಅಥವಾ ಬಣ್ಣ ಹಚ್ಚಿಕೊಂಡು ತಲೆಯ ಮೇಲೆ ವಿಶೇಷವಾಗಿ ತಯಾರಿಸಲಾದ ಬಣ್ಣದ ಹಾಳೆ ಅಂಟಿಸಿದ ಟೊಪ್ಪಿಗೆ ಧರಿಸಿ ಸಂಕೇತಗಳ ಮೂಲಕವೇ ಜನರಿಂದ ಹಣ ಕೇಳುತ್ತಾರೆ. ಹೀಗೆ ಕೇಳುವಾಗ ಯಾರಾದರೂ ಮಾತನಾಡಿಸಿದರೆ ತಲೆಯ ಮೇಲಿನ ಟೊಪ್ಪಿಗೆ ತೆಗೆದು ಮಾತನಾಡುತ್ತಾರೆ. ಜನರು ಅಚ್ಚೊಳ್ಳಿ ಅಥವಾ ಕಳ್ಳಳ್ಳಿ ವೇಷ ಧರಿಸಿದವರಿಗೆ ಇಲ್ಲ ಎನ್ನದೇ ತಮ್ಮ ಕೈಲಾದಷ್ಟು ಹಣ ನೀಡಿ ಕಳುಹಿಸುತ್ತಾರೆ.

ಕೆಲವರು ತಮ್ಮ ಅರಿಕೆ ಪೂರೈಸಿಕೊಳ್ಳಲು ನಿನ್ನ ಹಬ್ಬಕ್ಕೆ ಹುಲಿ ವೇಷ ಹಾಕಿ ಕುಣಿದು ಭಕ್ತಿಯನ್ನು ಸಮರ್ಪಿಸುತ್ತೇನೆ ಎಂದು ಬೇಡಿಕೊಳ್ಳುತ್ತಾರೆ. ಅದರಂತೆ ನಿಜವಾದ ಹುಲಿಯ ರೀತಿಯ ಬಣ್ಣವನ್ನು ಹಾಕಿಕೊಂಡು ಹಳ್ಳಿಗಳಲ್ಲಿ ಕುಣಿದು, ಹಬ್ಬದ ದಿನ ವಿಶೇಷವಾಗಿ ಕುಣಿದು ತಮ್ಮ ಹರಿಕೆ ಪೂರೈಸುತ್ತಾರೆ.

ಹುಲಿ, ಕರಡಿ ವೇಷ ಹಾಕಿ ಓಣಿಗಳಲ್ಲಿ ಮಕ್ಕಳ ಹಿಂದೆ ಬಿದ್ದು ಅವರನ್ನು ರಂಜಿಸುತ್ತಾರೆ. ಹಿರಿಯರಿಂದ ಅವರು ಕೊಡುವ ಕಾಣಿಕೆ ಪಡೆಯುತ್ತಾರೆ. ದೂರದ ಊರಿಂದ ಇಲ್ಲಿಗೆ ಬಂದು ಕುಣಿದು, ದಣಿದು ತಮ್ಮ ಉದರ ತುಂಬಿಸಿಕೊಳ್ಳುವುದು ಒಂದು ಭಾಗವಾದರೆ, ಮತ್ತೊಂದು ಕಡೆ ದೇವರಿಗೆ ಹರಿಕೆ ಸಲ್ಲಿಸುವುದು ಬಹು ಮುಖ್ಯವಾಗಿರುತ್ತದೆ.

ಓಣಿಗಳಲ್ಲಿ ಗೃಹಿಣಿಯರು ತಮ್ಮ ಸಣ್ಣ ಮಕ್ಕಳಿಗೆ ‘ಭಯ ದೂರವಾಗಲಿ’ ಎಂದು ತಾವೇ ಸಿದ್ಧಪಡಿಸಿದ ಹಗ್ಗದ ಎಟು ಕೊಡಿಸುತ್ತಾರೆ. ಹೀಗೆ ಮೊಹರಂ ಆಚರಣೆ ಹಲವು ಮಹತ್ವದ ಆಚರಣೆ ಹಾಗೂ ನಂಬಿಕೆಗಳಿಗೆ ಹಲವಾರು ಮಹತ್ವ ಮತ್ತು ನಂಬಿಕೆಗಳನ್ನು ಹೊಂದಿ, ಬರೀ ಮುಸ್ಲಿಂ ಅಲ್ಲದೆ ಹಿಂದೂಗಳೇ ಹೆಚ್ಚಾಗಿ ಆಚರಿಸುವ ಹಬ್ಬ ಇದಾಗಿದೆ.

ಗ್ರಾಮೀಣ ಭಾಗದಲ್ಲಿ ಮೊಹರಂ ಆಚರಣೆಯಲ್ಲಿ ಹಿಂದೂಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಕೆಲಸ ಅರಸಿ ನಗರಗಳಿಗೆ ತೆರಳಿದವರೂ ಹರಕೆ ತೀರಿಸಲು ಗ್ರಾಮಗಳಿಗೆ ವಾಪಸಾಗುತ್ತಾರೆ
ಈಶಪ್ಪ ಮಳಗಿ ಪಟ್ಟಣದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.