ADVERTISEMENT

ಶಾಲೆಗಳಿಗೆ ರಂಗ ಶಿಕ್ಷಕರನ್ನು ನೇಮಕ ಮಾಡಿ

ಹೈದರಾಬಾದ್‌ ಕರ್ನಾಟಕ ರಂಗ ಕಲಾವಿದರ ಒಕ್ಕೂಟದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 4:54 IST
Last Updated 15 ಜೂನ್ 2021, 4:54 IST
ಕೊಪ್ಪಳದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಕೊಪ್ಪಳದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಕೊಪ್ಪಳ:ಹೈ.ಕ ವಿಶೇಷ ಕಲಂ 371 (ಜೆ) ಅಡಿಯಲ್ಲಿ ಕಲಬುರ್ಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಹೆಚ್ಚುವರಿ ಆಯುಕ್ತರು ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ (ಜಿಪಿಐ) ಶಿಕ್ಷಕರ ನೇಮಕಾತಿಯಲ್ಲಿ ರಂಗ ಶಿಕ್ಷಕರನ್ನು ಸೇರಿಸಬೇಕು ಎಂದು ರಂಗ ಕಲಾವಿದರು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಮಂಗಳವಾರಜಿಲ್ಲಾಡಳಿತದ ಮೂಲಕ ಶಿಕ್ಷಣ ಸಚಿವರಿಗೆ ಸಲ್ಲಿಸಲಾಯಿತು.

2018 ರ ಎಸ್.ಎ.ಟಿ.ಎಸ್ ಆಧಾರದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ (ತರಗತಿ 1-5 ) ನೇಮಕಾತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಪ್ರಾಥಮಿಕ ಶಾಲಾ ಸಹ ಶಿಕ್ಷಕರು (ಜಿಪಿಟಿ), ದೈಹಿಕ ಶಿಕ್ಷಣ ಶಿಕ್ಷಕರು, ಸಂಗೀತ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ತಯಾರಿಸಿ ಉಪನಿರ್ದೇಶಕರ ರುಜುವಿನೊಂದಿಗೆ ಸಲ್ಲಿಸಲು ಉಲ್ಲೇಖ -02 ರಲ್ಲಿ ಸೂಚಿಸಲಾಗಿದೆ ಎಂದರು.

ಆದರೆ ರಂಗಭೂಮಿ ಶಿಕ್ಷಕರ ಕುರಿತು ಪ್ರಸ್ತಾಪವಿಲ್ಲ.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಂಗಪದವೀಧರರು ಸುಮಾರು 300ಕ್ಕೂ ಹೆಚ್ಚು ಇದ್ದು, ಪ್ರಸ್ತುತ ನೇಮಕಾತಿಗೆ ಅಧಿಸೂಚನೆಯಲ್ಲಿ ಸಂಗೀತ, ಚಿತ್ರಕಲಾ ಶಿಕ್ಷಕರೊಂದಿಗೆ ರಂಗ ಶಿಕ್ಷಕರನ್ನು ಸೇರಿಸಿ, ಶೇ 30 ರಷ್ಟಾದರೂ ಹುದ್ದೆಗಳಿಗೆ ನಾಟಕ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

2008 ರಲ್ಲಿ ರಾಜ್ಯದಾದ್ಯಂತ 63 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು 43 ಮಂದಿಯನ್ನು ಮಾತ್ರ ಇಲಾಖೆ ನೇಮಕ ಮಾಡಿಕೊಂಡಿತ್ತು. ಅಂದಿನಿಂದ ಈವರೆಗೆ ಹೊಸದಾಗಿ ನೇಮಕಾತಿ ನಡೆದಿಲ್ಲ. ಜತೆಗೆ ಎಂಟಕ್ಕೂ ಹೆಚ್ಚು ಮಂದಿ ನಿವೃತ್ತಿ ಹೊಂದಿದ್ದು, ಆ ಹುದ್ದೆಗಳೂ ಸಹ ಖಾಲಿ ಇವೆ ಎಂದು ಹೇಳಿದ್ದಾರೆ.

ಎಲ್ಲೆಲ್ಲ ರಂಗಶಿಕ್ಷಕರ ನೇಮಕಾತಿ ಆಗಿದೆಯೋ ಅಲ್ಲಿ ಶಾಲೆಯ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಾಲೆಯ ಬಗ್ಗೆ ಸಾರ್ವಜನಿಕ ಗೌರವ ಹೆಚ್ಚಾಗಿದೆ. ಈ ನೆಲೆಯಲ್ಲಿ ಪ್ರತಿ ಶಾಲೆಯಲ್ಲೂ ರಂಗಶಿಕ್ಷಕರ ಅತ್ಯಗತ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುವ ಪಟ್ಟಿಯಲ್ಲಿ ರಂಗಶಿಕ್ಷಕರನ್ನೂ ಸಹ ಸೇರಿಸಬೇಕು ಮತ್ತು ರಂಗಶಿಕ್ಷಕರ ವಯೋಮಿತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಲಾವಿದರ ಸಂಯೋಜಕ, ರಂಗ ಪದವೀಧರ ಲಕ್ಷ್ಮಣ ಪೀರಗಾರ, ರಂಗನಾಥ ಕೋಳೂರು, ಬಸವರಾಜ ಶೀಲವಂತರ್, ಶರಣು ಶೆಟ್ಟರ್, ಮಂಜುನಾಥ ಗೊಂಡಬಾಳ, ಮರಿಸ್ವಾಮಿ ಕನಕಗಿರಿ ಹಾಗೂ ಬಸವರಾಜ್ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.