ADVERTISEMENT

ಹಿರೇಬೆಣಕಲ್ ಛಾಯಾಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 7:27 IST
Last Updated 20 ಆಗಸ್ಟ್ 2025, 7:27 IST
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಹಿರೇಬೆಣಕಲ್‌ನಲ್ಲಿರುವ ಪ್ರಾಗೈತಿಹಾಸಿಕ ಸ್ಥಳಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು  
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಹಿರೇಬೆಣಕಲ್‌ನಲ್ಲಿರುವ ಪ್ರಾಗೈತಿಹಾಸಿಕ ಸ್ಥಳಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು     

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ನಲ್ಲಿರುವ ಐದು ಸಾವಿರ ವರ್ಷಗಳಷ್ಟು ಹಳೆಯದಾದ ಶಿಲಾ ಸಮಾಧಿಗಳ ಪ್ರಾಗೈತಿಹಾಸಿಕ ಸ್ಥಳಗಳ ತರಹೇವಾರಿ ಛಾಯಾಚಿತ್ರಗಳು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಮುಂಭಾಗದಲ್ಲಿ ಮಂಗಳವಾರ ಕಂಗೊಳಿಸಿದವು.  

ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಿಲ್ಲೆಯ ಹಿರೇಬೆಣಕಲ್‌ ಗ್ರಾಮದ ಬೆಟ್ಟದ ಮೇಲಿರುವ ಈ ಚಿತ್ರಗಳನ್ನು ಎಲ್ಲರಿಗೂ ಪರಿಚಯಿಸಬೇಕು ಎನ್ನುವ ಕಾರಣಕ್ಕಾಗಿ ಪ್ರವಾಸೋದ್ಯಮ ಇಲಾಖೆ ಛಾಯಾಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು. 

ದೇಶದಲ್ಲಿ ಮೇಘಾಲಯ ಮತ್ತು ಹಿರೇಬೆಣಕಲ್‌ನಲ್ಲಿ ಮಾತ್ರ ಆದಿಮಾನವರು ವಾಸವಾಗಿದ್ದ ಕುರುಹುಗಳು ಇವೆ. ಹಿರೇಬೆಣಕಲ್ ಮೋರೆರ ಬೆಟ್ಟಗಳನ್ನು ವಿಶ್ವಪಾರಂಪರಿಕ ತಾಣವಾಗಿಸಲು ರೂಪಿಸಬೇಕಾದ ಕ್ರಮಗಳ ಬಗ್ಗೆಯೂ ಸರ್ಕಾರ ಯೋಜನೆ ರೂಪಿಸುತ್ತಿದೆ.

ADVERTISEMENT

ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರು ಜೂನ್‌ನಲ್ಲಿ ಜಿಲ್ಲೆಯ ಪ್ರವಾಸ ಕೈಗೊಂಡಾಗ ನಮ್ಮ ಸ್ಮಾರಕ ದರ್ಶನ ಮತ್ತು ಸ್ಮಾರಕಗಳ ಸಂರಕ್ಷಣೆಯ ಪ್ರವಾಸದ ಅಂಗವಾಗಿ ಹಿರೇಬೆಣಕಲ್‌ಗೆ ಭೇಟಿ ನೀಡಿದ್ದಾಗ,‘ಇಲ್ಲಿನ ಸ್ಮಾರಕಗಳ ಮೌಲ್ಯ ಎಲ್ಲರಿಗೂ ಗೊತ್ತಾಗುವಂತೆ ಮಾಡಲು ಬೆಂಗಳೂರಿನಲ್ಲಿ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸುವುದಾಗಿ’ ಹೇಳಿದ್ದರು. ಅದರಂತೆ ಬೆಂಗಳೂರಿನಲ್ಲಿ ಪ್ರದರ್ಶನ ನಡೆಯಿತು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.