ADVERTISEMENT

ಕುಕನೂರು: ಪ್ರತಿ ತಿಂಗಳು ಗುರುಕುಲದಲ್ಲಿ ಧ್ವಜಾರೋಹಣ

ರಾಷ್ಟ್ರೀಯ ಆಂದೋಲನದ ಭಾಗವಾಗಿದ್ದ ಕುಕನೂರಿನ ಶತಮಾನದ ಶಾಲೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:57 IST
Last Updated 10 ಆಗಸ್ಟ್ 2022, 4:57 IST
ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಧ್ವಜರೋಹಣ ನಡೆದ ಸಂದರ್ಭ
ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಧ್ವಜರೋಹಣ ನಡೆದ ಸಂದರ್ಭ   

ಕುಕನೂರು: ಸಾಮಾನ್ಯವಾಗಿ ದೇಶದಾದ್ಯಂತ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಗಳಂದು ಮಾತ್ರ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ,ರಾಷ್ಟ್ರೀಯ ಆಂದೋಲನದ ಭಾಗವಾಗಿದ್ದ ಶತಮಾನ ಕಂಡ ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಪ್ರತಿ ತಿಂಗಳು 2ನೇ ತಾರೀಖು ರಾಷ್ಟ್ರಧ್ವಜ ಹಾರಾಡುವುದು ವಿಶೇಷ.

ಈ ಸಂಸ್ಥೆಯಲ್ಲಿ ಪ್ರಪ್ರಥಮವಾಗಿ ಹಾರಾಡಿದ ತ್ರಿವರ್ಣ ಧ್ವಜಕ್ಕೆ ರೋಚಕ ಇತಿಹಾಸವಿದೆ. ಕರ್ನಾಟಕದ ಖಾದಿಜನಕ ಎಂದೇ ಹೆಸರಾದ ಕೌಜಲಗಿ ಹನುಮಂತರಾಯರೆ ಈ ಧ್ವಜಾರೋಹಣದ ನೇತಾರರು.

ಹನುಮಂತರಾಯರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಜೈಲಿನಲ್ಲಿದ್ದರು. ಮಹಾತ್ಮ ಗಾಂಧೀಜಿಯವರ ಆದೇಶದಂತೆ ಜೈಲಿನ ಕಂಬಿಗಳ ಹಿಂದೆ ಚರಕದ ಮೂಲಕ ಖಾದಿದಾರದಿಂದ ಧ್ವಜಕ್ಕೆ ಸಾಕಾಗುವಷ್ಟು ನೂಲು ತಯಾರಿಸಿ ಗಾಂಧೀಜಿಗೆ ನೀಡಲು ಹೋದರು. ಆದರೆ ಅವರು ನಿರಾಕರಿಸಿ ರಾಷ್ಟ್ರಧ್ವಜಕ್ಕೆ ಹೆಣೆದಿರುವ ನೂಲು ರಾಷ್ಟ್ರ ಧ್ವಜಕ್ಕಾಗಿಯೇ ಅರಳಲಿ ಎಂದಿದ್ದರು.

ADVERTISEMENT

ರಾಷ್ಟ್ರೀಯ ಭಕ್ತಿ ಮೈಗೂಡಿಸಿಕೊಂಡಿರುವ ಶಾಲೆಗೆ ಅಥವಾ ಸಂಸ್ಥೆಗೆ ನೂಲು ನೀಡಿ ಎಂದು ಗಾಂಧೀಜಿ ಹೇಳಿದ್ದರಂತೆ. ಹನುಮಂತರಾಯರು ಇದನ್ನು ರಾಷ್ಟ್ರೀಯ ಶಾಲೆಗೆ ನೀಡಿ ಎಂದು ಬರೆದಿದ್ದರು. ಅವರ ಹಿರಿಯ ಮಗ ಮಧ್ವರಾವ ಕೌಜಲಗಿ ಇಲ್ಲಿನ ವಿದ್ಯಾನಂದ ಗುರುಕುಲಕ್ಕೆ ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಶಾಲೆಯಲ್ಲಿ 1999 ಆಗಸ್ಟ್ 2ರಿಂದ ಪ್ರತಿ ತಿಂಗಳು ಧ್ವಜಾರೋಹಣ ನಡೆದುಕೊಂಡು ಬರುತ್ತಿದೆ.

ರಾಷ್ಟ್ರೀಯ ಆಂದೋಲನ: 20ನೇ ಶತಮಾನದ ಮೊದಲ ದಶಕದಲ್ಲಿ ಮಹಾತ್ಮ ಗಾಂಧೀಜಿ ಸಾರಿದ ಅಸಹಕಾರ ಚಳವಳಿ ಮೂಲಕ ಭಾರತ ದೇಶದಲ್ಲಿ ಶಿಕ್ಷಣದ ಬೆಳ್ಳಿಚುಕ್ಕಿ ಮೂಡಿತು. ಲೋಕಮಾನ್ಯ ತಿಲಕರು ರಾಷ್ಟ್ರೀಯ ಶಿಕ್ಷಣಾಂದೋಲನದ ನೇತರರಾಗಿ ಜನಜಾಗೃತಿ ಉಂಟು ಮಾಡಿದರು. ಇದರ ಪ್ರಭಾವ ನಿಜಾಮ್‌ ಸಂಸ್ಥಾನದ ಭಾಗಕ್ಕೂ ಹರಡಿತು. 1907ರಲ್ಲಿ ಕಲಬುರಗಿಯಲ್ಲಿ ನೂತನ ವಿದ್ಯಾಲಯಆರಂಭವಾಯಿತು.ಇದರತಂಗಾಳಿ ಕುಕನೂರಿನಲ್ಲಿ ಬೀಸಿ 1922ರಲ್ಲಿ ರಾಷ್ಟ್ರೀಯ ಶಾಲೆಯಾಗಿ ಗುರುಕುಲ ಕಾರ್ಯಾರಂಭ ಮಾಡಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದ ಜನರಿಗೆ ರಾಷ್ಟ್ರೀಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವಲ್ಲಿ ಗುರುಕುಲ ಪ್ರಮುಖ ಪಾತ್ರ ವಹಿಸಿತು. ಖ್ಯಾತ ಅಗ್ರಹಾರವೂ ಆಗಿದ್ದ ಗುರುಕುಲದಲ್ಲಿ ಮೊದಲು ಮೂವರು ಜನ ಶಿಕ್ಷಕರು ಮತ್ತು 65 ವಿದ್ಯಾರ್ಥಿಗಳು ಇದ್ದರು.

ಈ ಶಾಲೆಯಲ್ಲಿ ಹೆಸರಾಂತ ಸಂಶೋಧಕ ಡಾ. ಪಾಂ. ಭೀ. ದೇಸಾಯಿ, ಪ್ರಾಧ್ಯಾಪಕರಾಗಿದ್ದ ರಾಮಚಂದ್ರರಾವ್‌ ಪಟವಾರಿ, ಎಚ್‌.ಜಿ. ಉಪಾಧ್ಯ, ಹೆಸರಾಂತ ವಕೀಲ ಅನ್ನದಾನಯ್ಯ ಪುರಾಣಿಕ, ಶಾಸಕರಾಗಿದ್ದ ಶಿರೂರು ವೀರಭದ್ರಯ್ಯ, ಕವಿ ಸಿದ್ದಯ್ಯ ಪುರಾಣಿಕ ಸೇರಿದಂತೆ ಅನೇಕ ಖ್ಯಾತನಾಮರು ಓದಿದ್ದಾರೆ.

ರಾಷ್ಟ್ರದ ಹಿತ ಕಾಪಾಡುವ ಸಂದರ್ಭ ಬಂದಾಗ 1947ರ ಚಲೇಜಾವ್‌ ಚಳವಳಿ ಸಮಯದಲ್ಲಿ ಈ ಶಾಲೆಯ ಶಿಕ್ಷಕರಾಗಿದ್ದ ಭೀಮಜ್ಜ ಮುರಡಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಶಾಲೆಯ ಸಂಸ್ಥಾಪಕ ಶಿಕ್ಷಕರಾದ ರಾಘವೇಂದ್ರ ದೇಸಾಯಿ ಸೇರಿದಂತೆ ಅನೇಕರು ಬಿತ್ತಿದ ರಾಷ್ಟ್ರೀಯ ಶಿಕ್ಷಣದ ಬೀಜ ಈಗ ಹೆಮ್ಮೆರವಾಗಿ ಬೆಳೆದಿದೆ.

*
ಯುವಕರಲ್ಲಿ ದೇಶಾಭಿಮಾನ ತುಂಬಲು ಸಂಸ್ಥೆ ಆರಂಭವಾಯಿತು. ಈಗ ಜ್ಞಾನಾರ್ಜನೆ ಜೊತೆಗೆ ದೇಶಭಕ್ತಿಯ ಅರಿವು ಮೂಡಿಸಲಾಗುತ್ತದೆ
-ಕೃಷ್ಣ ಕುಲಕರ್ಣಿ, ಪ್ರಾಚಾರ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.