ADVERTISEMENT

ಗಂಗಾವತಿ; ಎಲ್ಲೆಡೆ ಬಣ್ಣದ ಹೋಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:48 IST
Last Updated 20 ಮಾರ್ಚ್ 2022, 5:48 IST
ಗಂಗಾವತಿ ತಾ‌ಲ್ಲೂಕು ಪಂಚಾಯಿತಿ ಕಚೇರಿ ಸಿಬಂದಿ ಹೋಳಿ ಹಬ್ಬ ಆಚರಿಸಿ ಬಣ್ಣ ಹಚ್ಚಿಕೊಂಡರು
ಗಂಗಾವತಿ ತಾ‌ಲ್ಲೂಕು ಪಂಚಾಯಿತಿ ಕಚೇರಿ ಸಿಬಂದಿ ಹೋಳಿ ಹಬ್ಬ ಆಚರಿಸಿ ಬಣ್ಣ ಹಚ್ಚಿಕೊಂಡರು   

ಗಂಗಾವತಿ: ಹೋಳಿ ಹಬ್ಬವನ್ನು ತಾಲ್ಲೂಕಿನಾದ್ಯಂತ ಶನಿವಾರ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಸಂಭ್ರಮದಿಂದ ಆಚರಿಸಿದರು.

ನಗರದ ವಿವಿಧ ವಾರ್ಡ್, ಗಾಂಧಿವೃತ್ತ, ಮಹಾವೀರ ವೃತ್ತ, ಬನ್ನಿಗಿಡದ ಕ್ಯಾಂಪ್, ಜುಲೈನಗರ, ಸಿಬಿಎಸ್ ವೃತ್ತ, ಜಂತಕಲ್ ಸೇರಿದಂತೆ ವಿಧೆಡೆ ತಂಡೋಪತಂಡವಾಗಿ ಪರಸ್ಪರ ಬಣ್ಣ ಎರಚಿ, ಶುಭಾಶಯ ವಿನಿಮಯ ಮಾಡಿಕೊಂಡು ಹಲಗೆ ಬಾರಿಸುತ್ತಾ, ಗಡಿಗೆ ಹೊಡೆಯುವ ಮೂಲಕ ಹೋಳಿ ಸಡಗರದಲ್ಲಿ ಮುಳುಗಿದರು.

ಯುವಕರು ಮೈಯೆಲ್ಲ ಬಣ್ಣ ಬಳಿದುಕೊಂಡು ಬೈಕ್ ಮೇಲೆ ಪ್ರಮುಖ ವೃತ್ತಗಳಲ್ಲಿ ಸುತ್ತಾಡಿದರು. ಬೆಳಿಗ್ಗೆಯಿಂದ ಆರಂಭವಾದ ರಂಗಿನಾಟ ಮಧ್ಯಾಹ್ನದ ವರೆಗೆ ನಡೆಯಿತು.

ADVERTISEMENT

ಚಿಣ್ಣರು, ಮಹಿಳೆಯರು ತಮ್ಮ ಮನೆಗಳ ಮುಂದೆ ಪರಸ್ಪರ ಬಣ್ಣ ಬಳಿದುಕೊಂಡು ಸಂಭ್ರಮಿಸಿದರು. ಶುಕ್ರವಾರ ರಾತ್ರಿ ನಗರದ ವಿವಿಧೆಡೆ ಕಾಮದಹನ ಮಾಡಲಾಗಿತ್ತು.

ನೀಲ ಕಂಠೇಶ್ವರ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತದ ಆಯೋಜಿಸಿದ್ದ ಡಿಜೆ ಕುಣಿತದಲ್ಲಿ ನಗರದ ಮಹಿಳೆಯರು, ಯುವತಿಯರು ಭಾಗವಹಿಸಿ ಬಣ್ಣದಲ್ಲಿ ಮಿಂದ್ದೆದು ಕುಣಿದು ಕುಪ್ಪಳಿಸಿದರು.

ನಗರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಮೆಡಿಕಲ್, ಹಣ್ಣು, ತರಕಾರಿ, ಮಾಂಸ ಹಾಗೂ ಅಲ್ಲಲ್ಲಿ ಕಿರಾಣಿ ಅಂಗಡಿಗಳು ತೆರೆದಿದ್ದವು.

ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ಮತ್ತು ಕುಟುಂಬಸ್ಥರು, ವಿವಿಧ ಗ್ರಾಮ ಪಂಚಾಯಿತಿಗಳು ಪಿಡಿಒಗಳು ತಾ.ಪಂ ಕಾರ್ಯಾಲದಲ್ಲಿ ಪರಸ್ಪರ ಬಣ್ಣ ಹಚ್ಚಿಕೊಂಡರು.

ಹಳ್ಳಿಯಲ್ಲಿ ಕಳೆಗುಂದಿದ ಹೋಳಿ: ತಾಲ್ಲೂಕಿನ ಸಾಣಾಪುರ, ಚಿಕ್ಕರಾಂಪುರ, ಆನೆಗುಂದಿ, ಕಡೆಬಾಗಿಲು, ಬಸವನದುರ್ಗಾ ಸಂಗಾಪುರ ಗ್ರಾಮದಲ್ಲಿ ಹೋಳಿ ಹಬ್ಬದ ದೊಡ್ಡ ಸಡಗರ ಕಂಡುಬರಲಿಲ್ಲ. ಮಕ್ಕಳು ಹೊರತುಪಡಿಸಿ ಯುವಕರು, ಮಹಿಳೆಯರು ಹಬ್ಬ ಆಚರಣೆಗೆ ಮುಂದಾಗಲಿಲ್ಲ.

ಪೋಲಿಸ್ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಗಾಂಧಿ ವೃತ್ತ, ಕೃಷ್ಣ ದೇವರಾಯ ವೃತ್ತ, ಜುಲೈನಗರ,ಇಸ್ಲಾಂಪುರ ವೃತ್ತದ ಬಳಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಹೋಳಿ ನಂತರ ಜನರು ದೇವಘಾಟ್, ಸಾಣಪುರ ಕೆರೆಯಲ್ಲಿ ಸ್ನಾನ ಮಾಡಿದರು. ಅಲ್ಲಲ್ಲಿ ಕುಳಿರು ಉಪಹಾರ ಸೇವಿಸಿದ್ದು ಕಂಡು ಬಂತು.

ಡಿವೈಎಸ್ಪಿ ರುದ್ರೇಶ್ ಉಜ್ಜನ ಕೊಪ್ಪ, ಗ್ರಾಮೀಣ ಠಾಣೆಯ ಶಾರದ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡಿದರು. ಕಾಲುವೆ, ಹಳ್ಳ, ನದಿಪಾತ್ರದಲ್ಲಿನ ಈಜಾಡುತ್ತಿದ್ದವರನ್ನು ಮನೆಗಳಿಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.