ADVERTISEMENT

ತರಹೇವಾರಿ ಬಣ್ಣದ ಸ್ನಾನ: ಕಾಮ ದಹನ

ಕೋವಿಡ್‌ ಭೀತಿ ಹಿನ್ನೆಲೆ ಜಿಲ್ಲೆಯಾದ್ಯಂತ ಸರಳ ಹೋಳಿ ಆಚರಣೆ: ವಿವಿಧೆಡೆ ನಡೆಯದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 6:43 IST
Last Updated 30 ಮಾರ್ಚ್ 2021, 6:43 IST
ಸತೀಶ್
ಸತೀಶ್   

ಗಂಗಾವತಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಜನ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕೊರೊನಾ 2ನೇ ಅಲೆ ಭೀತಿಯ ಮಧ್ಯೆಯೂ ಹೆಚ್ಚು ಜನ ಒಂದೆಡೆ ಸೇರದೆ ಇದ್ದರೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಣ್ಣದ ಓಕುಳಿಯಲ್ಲಿ ಯುವಕರು ಮಿಂದೆದ್ದರು.

ಭಾನುವಾರ ಮಧ್ಯರಾತ್ರಿ ಕಾಮದಹನ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆಯಿಂದ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಯುವಕರು, ಸಣ್ಣ ಮಕ್ಕಳು ಸೇರಿದಂತೆ ಎಲ್ಲರೂ ಬಣ್ಣದ ಆಟ ಆಡಿದರು. ಗಾಂಧಿನಗರ, ಪಂಪಾ ನಗರ, ಅಂಬೇಡ್ಕರ್ ಸರ್ಕಲ್ ಸೇರಿದಂತೆ ವಿವಿಧೆಡೆಯಲ್ಲಿ ಯುವಕರು ಬಣ್ಣದಲ್ಲಿ ಮಿಂದೆದ್ದರು.

ADVERTISEMENT

ತುಂಗಾಭದ್ರೆಯಲ್ಲಿ ಸ್ನಾನ: ಬಣ್ಣ ಆಡಿದ ಬಳಿಕ ತುಂಗಾಭದ್ರೆಯ ಸಣಾಪುರ, ಆನೆಗೊಂದಿ, ವಿರುಪಾಪುರ ಗಡ್ಡಿ, ಬೃಂದಾವನ, ದೇವಘಾಟ್, ಕಂಪ್ಲಿ ಹೊಳೆ ಸೇರಿದಂತೆ ವಿವಿಧೆಡೆ ಜಲಮೂಲಗಳಲ್ಲಿ ಮಿಂದೆದ್ದರು. ಅಲ್ಲದೆ, ಖಾಸಗಿ ತೋಟ, ಕೃಷಿ ಹೊಂಡಗಳಲ್ಲಿ ಸ್ನಾನ ಮಾಡಿದರು.

ಇನ್ನೂ, ನಗರದ ಪ್ರಮುಖ ಓಣಿಗಳಲ್ಲಿ ಹುಡುಗರು, ಮ್ಯೂಸಿಕ್ ಬಾಕ್ಸ್‌ಗಳನ್ನು ಇಟ್ಟುಕೊಂಡು ಚಲನಚಿತ್ರ ಗೀತೆಗಳಿಗೆ ಸಖತ್ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಹಬ್ಬದ ನಿಮಿತ್ತ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮದ್ಯದಂಗಡಿಗಳನ್ನ ಕಟ್ಟುನಿಟ್ಟಾಗಿ ಬಂದ್ ಮಾಡಲಾಗಿತ್ತು.

ಬಣ್ಣಕ್ಕೆ ಅಡ್ಡಿಯಾಗದ ಕೊರೊನಾ ಭೀತಿ: ಇನ್ನು, ದೇಶಾದ್ಯಂತ ಕೊರೊನಾ ವೈರಸ್ 2ನೇ ಅಲೆಯ ಭೀತಿ ಎಲ್ಲೆಡೆ ಇದ್ದರೂ, ನಗರದಲ್ಲಿ ಮಾತ್ರ ಹೋಳಿ ಹಬ್ಬದ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ಆದರೇ, ಕೆಲವರು ನೈಸರ್ಗಿಕ ಬಣ್ಣಗಳನ್ನು ಬಳಸಿ ಆಡಿದರೆ, ಇನ್ನು, ಕೆಲ ಮಹಿಳೆಯರು, ಮಕ್ಕಳು ಅರಿಶಿನ ಪುಡಿಯನ್ನು ನೀರಿನಲ್ಲಿ ಕಲಬೆರಕೆ ಮಾಡಿಕೊಂಡು ಪರಸ್ಪರ ಹಚ್ಚುವ ಮೂಲಕ ಹೋಳಿಯನ್ನು ಸಂಭ್ರಮಿಸಿದರು. ಈ ಬಾರಿ ನಗರದಲ್ಲಿ ಎಲ್ಲ ಕಡೆ ಮಡಕೆ ಒಡೆಯುವುದು ನಿಷೇಧಿಸಲಾಗಿತ್ತು.

ಕುಷ್ಟಗಿ: ಸಾಂಕೇತಿಕ ಆಚರಣೆ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದ್ದು, ಈ ಕಾರಣಕ್ಕೆ ಈ ಬಾರಿ ಬಣ್ಣದ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಸರ್ಕಾರದ ಕೋವಿಡ್ ಮಾರ್ಗಸೂಚಿಯ ಪ್ರಕಾರ ಎಲ್ಲ ರೀತಿಯ ಸಾರ್ವಜನಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹಾಗಾಗಿ ಪಟ್ಟಣದಲ್ಲಿ ಬಣ್ಣದ ಹಬ್ಬದ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಡಿಜೆ ಧ್ವನಿವರ್ಧಕದ ಬಳಕೆ ಇರಲಿಲ್ಲ. ಅದೇ ರೀತಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಗುಂಪು ಕಂಡುಬರಲಿಲ್ಲ.

ಮನೆ ಮನೆಗಳಲ್ಲಿ ಕುಟುಂಬದವರು, ನೆರೆಹೊರೆಯವರು, ಮಕ್ಕಳು ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಸ್ನೇಹಿತರು, ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳ ಪ್ರತಿನಿಧಿಗಳು ಸ್ನೇಹಿತರೊಂದಿಗೆ ಸಾಂಕೇತಿಕವಾಗಿ ಬಣ್ಣದ ಹಬ್ಬ ಆಚರಿಸಿದರು.

ಅದೇ ರೀತಿ ಮುಸ್ಲಿಂ ಯುವಕರು ಸೇರಿದಂತೆ ಎಲ್ಲ ಸಮುದಾಯಗಳ ಯುವಕರು ಓಕುಳಿ ಹಬ್ಬದಲ್ಲಿ ಭಾಗಿಯಾಗಿದ್ದು ಕಂಡುಬಂದಿತು. ಬಣ್ಣದ ಹಬ್ಬದ ಕಾರಣಕ್ಕೆ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು, ತರಕಾರಿ ಮಾರುಕಟ್ಟೆ, ಗಂಜ್‌ ಸೇರಿದಂತೆ ಎಲ್ಲೆಡೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಯಲಿಲ್ಲ. ಸಂಜೆ ನಂತರ ಒಂದೊಂದಾಗಿ ಅಂಗಡಿಗಳು ಬಾಗಿಲು ತೆರೆದವು.

ಸರ್ಕಾರದ ಕಚೇರಿಗಳು, ಬ್ಯಾಂಕ್‌, ಸಾರಿಗೆ ವ್ಯವಸ್ಥೆ, ಶಾಲಾ ಕಾಲೇಜುಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು. ಬಣ್ಣದ ಹಬ್ಬದ ನೆಪದಲ್ಲಿ ಸರ್ಕಾರದ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು ಎಂದು ಸಾರ್ವಜನಿಕರು ನಂತರ ವಿವರಿಸಿದರು.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಯುಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

‘ಮರೆಯಾಗುತ್ತಿರುವ ಹಬ್ಬಗಳು: ಕಳವಳ’

ಕಾರಟಗಿ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಭಾನುವಾರ ರಾತ್ರಿ ಕಾಮದಹನ ಕಾರ್ಯಕ್ರಮ ಜರುಗಿತು.

ಡಾ.ರಾಜಕುಮಾರ ಕಲಾ ಮಂದಿರದ ಮುಂದಿನ ಅಲಾಯಿ ಕುಣಿಯಲ್ಲಿ ನಡೆದ ಕಾಮದಹನ ಕಾರ್ಯಕ್ರಮಕ್ಕೆ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಚಾಲನೆ ನೀಡಿದರು.

ಇದಕ್ಕೂ ಮೊದಲು ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಸಿಂಧನೂರಿನ ವಕೀಲೆ ಸಹನಾ ಹಿರೇಮಠ ಮಾತನಾಡಿ,‘ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ದುರಂತ. ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಿಂಬಿಸುವ ಹಬ್ಬಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಭಾ ಯುವತಿ ಸಂಘದವರು ಕಾಮದಹನ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನಾರ್ಹ’ ಎಂದರು.

ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕಿ ಹಾಗೂ ಯುವಜನ ಶಿಕ್ಷಣ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಬಿಜಕಲ್‌ ಮಾತನಾಡಿ,‘ಸಮಾಜದಲ್ಲಿ ಹೆಣ್ಣು ಅಂದರೆ ಸಂಸಾರದ ಕಣ್ಣು. ಮಹಿಳೆಯರು ಸಮಾಜಮುಖಿ ಕೆಲಸಗಳಲ್ಲಿ ಸಮರ್ಪಿಸಿಕೊಂಡು ಮಾದರಿಯಾಗಿದ್ದಾರೆ’ ಎಂದರು.

ಶಿಕ್ಷಕಿ ವಿಜಯಲಕ್ಷ್ಮೀ ಮೇಲಿನಮನಿ ಹಾಗೂ ವರದರಾಜ ಜೋಷಿ ಮಾತನಾಡಿದರು. ಪ್ರತಿಭಾ ಯುವತಿ ಸಂಘದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.