ADVERTISEMENT

ಜೇನುನೊಣ ಕಡಿದರೂ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 9:24 IST
Last Updated 26 ಮಾರ್ಚ್ 2023, 9:24 IST
   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಕುಷ್ಟಗಿಯ ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಭಾನುವಾರ ನಿಗದಿಯಾಗಿದ್ದ ಪ್ರವೇಶ ಪರೀಕ್ಷೆಗೆ ಹೋಗುವಾಗ ವಿದ್ಯಾರ್ಥಿಗಳ ಮೇಲೆ ಜೇನುನೊಣಗಳು ದಾಳಿ ನಡೆಸಿವೆ. ದಾಳಿಗೆ ಒಳಗಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆದರು.

ಕುಷ್ಟಗಿಯ ಬುತ್ತಿಬಸವೇಶ್ವರ ಪ್ರೌಢಶಾಲೆ ಹಾಗೂ ಜೂನಿಯರ್‌ ಕಾಲೇಜು, ಗುರುಚನ್ನಬಸವೇಶ್ವರ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜು (ಪ್ರೌಢಶಾಲೆ ವಿಭಾಗ), ಬಾಲಕರ ಜೂನಿಯರ್‌ ವಿಭಾಗ (ಪ್ರೌಢಶಾಲೆ ವಿಭಾಗ), ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ, ಕ್ರೈಸ್ತ ಕಿಂಗ್‌ ಶಾಲೆಗಳಲ್ಲಿ ಪ್ರವೇಶ ಪರೀಕ್ಷಾ ಕೇಂದ್ರಗಳಾಗಿದ್ದವು.

ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ, ತಳುವಗೇರಾ, ನಿಡಶೇಷಿ ಸೇರಿದಂತೆ ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ಕ್ರೈಸ್ತ ಕಿಂಗ್‌ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಾಗ ಈ ಘಟನೆ ನಡೆದಿದೆ. ಶಾಲೆಯ ಆವರಣದಲ್ಲಿ ಬೆಳೆದ ಮರದಲ್ಲಿ ಜೇನುಗೂಡು ಕಟ್ಟಿದ್ದು, ಏಕಾಏಕಿ ವಿದ್ಯಾರ್ಥಿಗಳು ಹಾಗೂ ಪಾಲಕರ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಇದರಿಂದಾಗಿ ವಿದ್ಯಾರ್ಥಿಗಳು ಕೆಲ ಹೊತ್ತು ಆತಂಕಗೊಂಡಿದ್ದರು.

ADVERTISEMENT

ಜೇನುನೊಣ ದಾಳಿಗೆ ಒಳಗಾದ ಹಲವು ವಿದ್ಯಾರ್ಥಿಗಳ ಪೈಕಿ ಮೂವರಿಗೆ ಕುಷ್ಟಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರು ಹಾಸಿಗೆ ಮೇಲೆ ಕುಳಿತುಕೊಂಡೇ ಪರೀಕ್ಷೆ ಬರೆದರು. ಒಂದು ಕೈಗೆ ಗ್ಲೂಕೋಸ್‌ ಹಾಕಿಸಿಕೊಂಡು, ಇನ್ನೊಂದು ಕೈಯಿಂದ ಪರೀಕ್ಷೆ ಬರೆದರು.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ.ಎ ರೆಡ್ಡೇರ್ ’ಜೇನುನೊಣ ದಾಳಿಗೆ ಒಳಗಾದ ಯಾವ ವಿದ್ಯಾರ್ಥಿಯೂ ಪರೀಕ್ಷೆಯಿಂದ ಹೊರಗುಳಿದಿಲ್ಲ. ಆಸ್ಪತ್ರೆಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಮೂವರು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಿಂದಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.