ADVERTISEMENT

ಕುಕನೂರು | ಜಿಟಿಜಿಟಿ ಮಳೆ: ರೈತನ ಸ್ಥಿತಿ ಚಿಂತಾಜನಕ

ಹೊಲದಲ್ಲಿಯೇ ಕೊಳೆತು ಮೊಳಕೆಯೊಡೆಯುತ್ತಿರುವ ಹೆಸರುಕಾಯಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:48 IST
Last Updated 18 ಆಗಸ್ಟ್ 2025, 6:48 IST
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸತತ ಮಳೆಯಿಂದ ಒಂದೇ ಕಡೆ ಕೂಡಿ ಹಾಕಿರುವ ಹೆಸರು ಬುಡ್ಡಿ 
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಸತತ ಮಳೆಯಿಂದ ಒಂದೇ ಕಡೆ ಕೂಡಿ ಹಾಕಿರುವ ಹೆಸರು ಬುಡ್ಡಿ    

ಕುಕನೂರು: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಹೆಸರು ಬೆಳೆ ರೈತಾಪಿ ವಲಯದಲ್ಲಿ ಹಸಿರು ಬಂಗಾರ ಎನ್ನಿಸಿಕೊಂಡಿದೆ. ಆದರೆ, ಎರಡು ಮೂರು ವಾರಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಜಿಟಿಜಿಟಿ ಮಳೆ ಹೆಸರು ಬೆಳೆಗೆ ಮಾರಕವಾಗಿ ಪರಿಣಮಿಸಿದ್ದು, ಕೊಯ್ಲಿಗೆ ಬಂದಿದ್ದ ಫಸಲು ಬಿಡಿಸಲಾಗದೆ ಬೆಳೆ ಹೊಲದಲ್ಲಿಯೇ ಕೊಳೆಯುವ ಸ್ಥಿತಿಗೆ ಬಂದಿದೆ.

ಮುಂಗಾರು ಮಳೆ ಬೀಳುತ್ತಲೇ ರೈತರು ಹೆಸರು ಬಿತ್ತನೆ ಮಾಡುವುದು ವಾಡಿಕೆ. ಇದು ಕೇವಲ 70 ದಿನಗಳ ಬೆಳೆಯಾಗಿದ್ದು, ಬಹಳಷ್ಟು ರೈತರು ಬಿತ್ತನೆ ಮಾಡುತ್ತಾರೆ. ಅದರಂತೆ ಈ ವರ್ಷವೂ ಸಾವಿರಾರು ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ.

ಕಳೆದ ವರ್ಷ ಮಳೆ ಕೊರತೆಯಿಂದಾಗಿ ಹೆಸರು ಸರಿಯಾಗಿ ಬೆಳೆದಿರಲಿಲ್ಲ. ಈ ವರ್ಷವಾದರೂ ಸಕಾಲಕ್ಕೆ ಮಳೆ ಬಂದು ಇಳುವರಿ ಪಡೆಯಬಹುದು ಎಂದು ರೈತರು ಕನಸು ಕಂಡಿದ್ದರು. ಆರಂಭದಲ್ಲಿ ಉತ್ತಮ ತೇವಾಂಶದಿಂದ ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಬಿಟ್ಟೂ ಬಿಡದೆ ಸುರಿದ ಮಳೆ ಹೆಸರು ಬೆಳೆಯನ್ನು ನಾಶ ಮಾಡಿದೆ.

ADVERTISEMENT

ಕೆಲ ರೈತರು ಮುಂಗಡ ಬಿತ್ತಿದ್ದು, ಅವರ ಫಸಲು ಸದ್ಯ ಕೊಯ್ಲಿಗೆ ಬಂದಿತ್ತು. ಆದರೆ, ನಿರಂತರ ಸುರಿದ ಮಳೆಯಿಂದಾಗಿ ಕಾಯಿ ಬಿಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಹೊಲದಲ್ಲಿಯೇ ಹೆಸರುಕಾಯಿ ಕೊಳೆತು ಮೊಳಕೆಯೊಡೆಯುತ್ತಿದೆ. ಅಳಿದುಳಿದ ಬೆಳೆಗೆ ಹಲವು ರೋಗಗಳು ಕಾಣಿಸಿಕೊಂಡಿವೆ. ಇದರಿಂದಾಗಿ ರೈತರಿಗೆ ಚಿಂತೆ ಶುರುವಾಗಿದೆ.

ನಿರಂತರ ಮಳೆಯಿಂದಾಗಿ ಕಾಯಿಗಳ ತುಂಬು ಕೊಳೆತು ಹೊಲಗಳಲ್ಲಿಯೇ ಉದುರಿ ಬೀಳುತ್ತಿವೆ. ಅಲ್ಲದೆ, ಹಳದಿ ರೋಗಬಾಧೆ ಬೆಳೆಯನ್ನು ಹಾಳು ಮಾಡಿದೆ. ಅದರೊಂದಿಗೆ ಇನ್ನಿತರ ರೋಗಗಳು ಬೆಳೆ ನಾಶ ಮಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ರೈತನದ್ದಾಗಿದೆ.

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಸಂಗಮೇಶ ಅಂಗಡಿ ಎಂಬುವರು ₹40 ಸಾವಿರ ಖರ್ಚು ಮಾಡಿ ನಾಲ್ಕು ಎಕರೆಯಲ್ಲಿ ಹೆಸರು ಬೆಳೆದಿದ್ದರು. ಆದರೆ, ಜಿಟಿಜಿಟಿ ಮಳೆಯಿಂದ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ. ಅದರೊಂದಿಗೆ ಬೆಳೆದ ಹೆಸರುಕಾಯಿ ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿದೆ.

ಕುಕನೂರಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಾಳಾಗಿರುವ ಹೆಸರು ಬೆಳೆ
₹30 ಸಾವಿರ ಖರ್ಚು ಮಾಡಿ ಎರಡು ಎಕರೆಯಲ್ಲಿ ಹೆಸರು ಬೆಳೆದಿದ್ದೆ. ಜಿಟಿಜಿಟಿ ಮಳೆಯಿಂದಾಗಿ ಇಡೀ ಬೆಳೆ ಕೊಳೆತು ಕಾಯಿಗಳು ಉದುರಿ ಬಿದ್ದಿವೆ. ಬಳ್ಳಿಯಲ್ಲಿಯೇ ಮೊಳಕೆಯೊಡೆಯುತ್ತಿವೆ
ಪ್ರಕಾಶ ಮುಧೋಳ ರೈತ
ಸಾವಿರಾರು ರೂಪಾಯಿ ಖರ್ಚು ಮಾಡಿ ಬಿಡಿಸಿದ ಹೆಸರು ಬುಡ್ಡಿ ನಿರಂತರ ಮಳೆಯಿಂದ ಒಂದೇ ಕಡೆ ಕೂಡಿ ಹಾಕಿ ಬುಳುಸುಗಟ್ಟುತ್ತಿವೆ. ರಾಶಿ ಮಾಡದೆ ಹಾಳಾಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ
ಸುರೇಶಪ್ಪ ರಾಜೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.