ADVERTISEMENT

ಹಾಸ್ಟೆಲ್‌ ದುರಸ್ತಿ: ಅನುದಾನ ದುರ್ಬಳಕೆ

ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ನಕಲಿ ದಾಖಲೆಗಳ ಸೃಷ್ಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 12:50 IST
Last Updated 1 ಜುಲೈ 2020, 12:50 IST
ದುರಸ್ತಿಯಾಗದ ಕುಷ್ಟಗಿ ತಾಲ್ಲೂಕು ಮುದೇನೂರಿನ ಬಿಸಿಎಂ ಹಾಸ್ಟೆಲ್‌ ಕಟ್ಟಡ
ದುರಸ್ತಿಯಾಗದ ಕುಷ್ಟಗಿ ತಾಲ್ಲೂಕು ಮುದೇನೂರಿನ ಬಿಸಿಎಂ ಹಾಸ್ಟೆಲ್‌ ಕಟ್ಟಡ   

ಕುಷ್ಟಗಿ: ಯಾವುದೇ ಕಾಮಗಾರಿಗಳನ್ನು ನಡೆಸದೆ ನಕಲಿ ಬಿಲ್‌ಗಳನ್ನು ಸೃಷ್ಟಿಸುವ ಮೂಲಕ ವಸತಿ ನಿಲಯಗಳ ಕಟ್ಟಡಗಳ ದುರಸ್ತಿಗೆ ಬಿಡುಗಡೆಯಾಗಿದ್ದ ಲಕ್ಷಾಂತರ ಅನುದಾನವನ್ನು ತುಂಡು ಗುತ್ತಿಗೆ ಹೆಸರಿನಲ್ಲಿ ಇಲ್ಲಿಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ತಾಲ್ಲೂಕಿನ ವಸತಿ ನಿಲಯಗಳಾದ ಮುದೇನೂರು ಗ್ರಾಮದ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ಛಾವಣಿ ದುರಸ್ತಿಗೆ ₹ 3 ಲಕ್ಷ, ಹೂಲಗೇರಾ ಗ್ರಾಮದ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ಛಾವಣಿ ದುರಸ್ತಿಗೂ ₹ 5 ಲಕ್ಷ ಅನುದಾನ 2019-20ನೇ ಹಣಕಾಸು ವರ್ಷದಲ್ಲಿ ಬಿಡುಗಡೆಯಾಗಿತ್ತು.

ಆದರೆ, ವಾಸ್ತವದಲ್ಲಿ ಈ ಎರಡೂ ಕಾಮಗಾರಿಗಳು ನಡೆಯದಿರುವುದು ಕಂಡುಬಂದಿದೆ. ಆದರೂ ಅಳತೆ ಪುಸ್ತಕದಲ್ಲಿ (ಎಂಬಿ ದಾಖಲೆ) ಕೆಲಸ ಮುಗಿದಿದೆ ಎಂಬ ಬಗ್ಗೆ ಕಿರಿಯ ಎಂಜಿನಿಯರ್‌ ಸುಳ್ಳು ಮಾಹಿತಿ ದಾಖಲಿಸಿದ್ದಾರೆ. ನಂತರ ಮುದೇನೂರು ಹಾಸ್ಟೆಲ್‌ ದುರಸ್ತಿ ಕೆಲಸದ ಹೆಸರಿನಲ್ಲಿ ಕಳೆದ ಜ.21 ರಂದು ₹ 2.99 ಲಕ್ಷ ಮತ್ತು ಹೂಲಗೇರಾ ಹಾಸ್ಟೆಲ್ ದುರಸ್ತಿ ಕೆಲಸದ ಹೆಸರಿನಲ್ಲಿ ಕಳೆದ ಮಾರ್ಚ್‌ 10 ರಂದು ₹ 4.72 ಲಕ್ಷ. ಕೊರಕೇರಾ ಗ್ರಾಮದಲ್ಲಿರುವ ಹಾಸ್ಟೆಲ್‌ದಲ್ಲಿ ನೀರಿನ ಸಂಪ್‌ ನಿರ್ಮಾಣ ನಡೆಯದಿದ್ದರೂ ₹ 50 ಸಾವಿರ ಹಣವನ್ನು ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಆರ್‌ಟಿಜಿಎಸ್‌ ಮೂಲಕ ಪಾವತಿಸಿರುವ ಗ್ರಾಮೀಣ ಅಭಿವೃದ್ಧಿ ಪಂಚಾಯಿತ್‌ರಾಜ್‌ ಇಲಾಖೆಯ ಗಾಂಧಿ ಸಾಕ್ಷಿ ಕಾಯಕ ದಾಖಲೆಗಳು 'ಪ್ರಜಾವಾಣಿ'ಗೆ ಲಭ್ಯವಾಗಿವೆ.

ADVERTISEMENT

ಅದೇ ರೀತಿ ₹ 1.50 ಲಕ್ಷ ಅನುದಾನದಲ್ಲಿ ನವಲಹಳ್ಳಿಯಲ್ಲಿರುವ ಹಾಸ್ಟೆಲ್ ಮುಖ್ಯದ್ವಾರ ನಿರ್ಮಾಣ. ಕುಷ್ಟಗಿಯ ಮೆಟ್ರಿಕ್‌ ಪೂರ್ವ ಬಾಲಕರ ನಿಲಯದಲ್ಲಿ ₹ 50 ಸಾವಿರದಲ್ಲಿ ನೀರಿನ ಸಂಪ್‌ ನಿರ್ಮಾಣದ ಕಾಮಗಾರಿಗಳು ಅರೆಬರೆಯಾಗಿ ನಡೆದಿದ್ದರೂ ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದ ಹಣ ಪಾವತಿಸಲಾಗಿದೆ.

ಇಲಾಖೆಗೆ ಪತ್ರ: ಈ ಕುರಿತು ವಿವರಿಸಿದ ಇಲ್ಲಿಯ ತಾಲ್ಲೂಕು ಬಿಸಿಎಂ ಅಧಿಕಾರಿ ಶ್ರೀನಿವಾಸ ನಾಯಕ, ಮಂಜೂರಾಗಿದ ಕೆಲಸ ಕಾಮಗಾರಿ ಇನ್ನೂ ನಡೆಯದಿರುವ ಬಗ್ಗೆ ಪತ್ರದ ಮೂಲಕ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಎಇಇ ಹೇಳಿಕೆ: ಈ ಬಗ್ಗೆ ಪಂಚಾಯತ್ ರಾಜ್‌ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಂಕರ ಮಳಗಿ ಅವರನ್ನು ಸಂಪರ್ಕಿಸಲಾಗಿ, 'ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿಸಲಾಗಿದೆ' ಎಂದರು. ಆದರೆ ವಾಸ್ತವದಲ್ಲಿ ಕೆಲಸವೇ ನಡೆಯದಿರುವ ಬಗ್ಗೆ ಕೇಳಿದಾಗ, ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದರು.

ಬೆಂಬಲಿಗರೇ ಗುತ್ತಿಗೆದಾರರು!

‘ಜಿಲ್ಲಾ ಪಂಚಾಯಿತಿ ಅಥವಾ ಶಾಸಕರ ಅನುದಾನ ಹೀಗೇ ಯಾವುದೇ ಅನುದಾನ ಬಿಡುಗಡೆಯಾದರೂ ಅವರವರ ಬೆಂಬಲಿಗರೇ ಕೆಲಸ ನಿರ್ವಹಿಸುತ್ತಾರೆ. ಎಲ್ಲ ಕಡೆ ಹೀಗೇ ನಡೆಯುತ್ತದೆ. ಇದು ಮೊದಲಿನಿಂದಲೂ ನಡೆದುಬಂದ ಅಲಿಖಿತ ಸಂಪ್ರದಾಯ. ನಿಯಮಗಳಲ್ಲಿ ಇರುವುದಿಲ್ಲ ಅಷ್ಟೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ' ಎಂದು ಪಂಚಾಯತ್‌ ರಾಜ್‌ ಇಲಾಖೆಯ ಎಇಇ ಶಂಕರ ಮಳಗಿ ಹೇಳುತ್ತಾರೆ.

ಆದರೆ, ಕಾಮಗಾರಿ ನಡೆದಿಲ್ಲ. ಎಂಜಿನಿಯರ್‌ ಎಂ.ಬಿ ದಾಖಲಿಸುತ್ತಾರೆ. ನಂತರ ಹಣವೂ ಪಾವತಿಯಾಗಿದ್ದು ಹೇಗೆ? ಎಂಬುದಕ್ಕೆ ಅವರು ಉತ್ತರ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.