ADVERTISEMENT

ನನೆಗುದಿಗೆ ಬಿದ್ದ ವಸತಿ ಯೋಜನೆ: ಗಗನಕುಸುಮವಾದ ಸೂರು

ಅನುಷ್ಠಾನಕ್ಕೆ ಮನಸ್ಸಿಲ್ಲ, ಕಾಮಗಾರಿಗೆ ವೇಗವಿಲ್ಲ: ಹಂಚಿಕೆಗಿಲ್ಲ ಆದ್ಯತೆ, ಕಚೇರಿಗಳಿಗೆ ಅಲೆದು ಸುಸ್ತಾದ ಜನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 2:16 IST
Last Updated 21 ಜೂನ್ 2021, 2:16 IST
ಸ್ವಂತ ಸೂರಿಗಾಗಿ ಶತಮಾನಗಳಿಂದ ಕಾಯುತ್ತಿರುವ ಗವಿಮಠ ಸಮೀಪದ ಸಜ್ಜಿಹೊಲದ ಹಕ್ಕಿಪಿಕ್ಕಿ ಜನಾಂಗ
ಸ್ವಂತ ಸೂರಿಗಾಗಿ ಶತಮಾನಗಳಿಂದ ಕಾಯುತ್ತಿರುವ ಗವಿಮಠ ಸಮೀಪದ ಸಜ್ಜಿಹೊಲದ ಹಕ್ಕಿಪಿಕ್ಕಿ ಜನಾಂಗ   

ಕೊಪ್ಪಳ: ಕಡುಬಡುವರಿಗೆ ಸರ್ಕಾರವು ವಿವಿಧ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತದೆ. ಆದರೆ, ಎರಡು ವರ್ಷದಿಂದ ಯಾವುದೇ ಪ್ರಗತಿ ಕಂಡು ಬಂದಿಲ್ಲ.ಇದರಿಂದ ಜನರು ಪರದಾಡುವಂತಹ ಸ್ಥಿತಿಯಿದೆ.

ಪ್ರಧಾನ ಮಂತ್ರಿ ಆವಾಸ್, ಅಂಬೇಡ್ಕರ್, ಬಸವ, ಆಶ್ರಯ ಸೇರಿದಂತೆ ಅನೇಕ ವಸತಿ ಯೋಜನೆಗಳು ಇದ್ದರೂ ಇನ್ನೂ ಫಲಾನುಭವಿಗಳ ಆಯ್ಕೆ ಹಂತದಲ್ಲಿ ಕೆಲವು ಇವೆ.ಇನ್ನೂ ಕೆಲವು ಯಾವುದೇ ಭೂಮಿಯನ್ನು ಖರೀದಿಸದೇ, ಮನೆಯನ್ನು ನಿರ್ಮಾಣ ಮಾಡದೇ ಕಾಲಹರಣ ಮಾಡಿದ್ದು, ಯೋಜನೆಗೆ ಕಳಂಕ ತರುವಂತೆ ಆಗಿದೆ.

ಆದರೆ ನಗರದಲ್ಲಿ ಮಾತ್ರ ಈ ಪರಿಸ್ಥಿತಿ ಇದಕ್ಕಿಂತ ಭಿನ್ನ ಕೋಟ್ಯಂತರ ವೆಚ್ಚ ಮಾಡಿ ಹಿರೇಸಿಂದೋಗಿ ರಸ್ತೆಯಲ್ಲಿ 500 ವಸತಿ ಗೃಹಗಳನ್ನು ನಿರ್ಮಾಣ ಮಾಡಿದರೂ ಅವುಗಳನ್ನು ಫಲಾನುಭವಿಗಳಿಗೆ ಹಂಚದೇ ನಿರ್ಮಿಸಿದ ಮರು ವರ್ಷವೇ ಅವಸಾನದತ್ತ ಸಾಗಿರುವುದು ಬಡವರಿಗೆ ಮನೆ ನೀಡುವ ಸರ್ಕಾರದ ಬದ್ಧತೆಯನ್ನು ಪ್ರಶ್ನೆ ಮಾಡುವಂತೆ ಆಗಿದೆ.

ADVERTISEMENT

ಮನೆ ಹಂಚಿಕೆ ಪ್ರತಿಷ್ಠೆ: ಜಿಲ್ಲಾಡಳಿತ, ನಗರಸ್ಥಳೀಯ ಸಂಸ್ಥೆಗಳು, ಶಾಸಕರು, ಜನಪ್ರತಿನಿಧಿಗಳಿಗೆ ಮನೆ ಹಂಚು ವುದೇ ಒಂದು ದೊಡ್ಡ ಪ್ರತಿಷ್ಠೆ ಪ್ರಶ್ನೆಯಾಗಿದೆ. ಫಲಾನುಭವಿಗಳ ಆಯ್ಕೆ ಯಿಂದ ಹಿಡಿದು, ಅವರಿಗೆ ಮನೆ ನೀಡುವ ಕುರಿತು ಮೇಲಿಂದ ಮೇಲೆ ಸಂಬಂಧಿಸಿ ದವರ ಬಳಿ ಎಡತಾಕುವುದೇ ಬಡವರ ಕೆಲಸವಾಗಿದೆ.

ಭೇಟಿಯಾದಾಗೊಮ್ಮೆ,‘ಮನೆ ಬಂದಿವೆ, ಕಾರ್ಪೋರೇಶನ್‌ನಲ್ಲಿ ಅರ್ಜಿ ಕೊಡಿ’ ಎಂಬ ಸಿದ್ಧ ಉತ್ತರವನ್ನು ಕೇಳಿ ಬಡವರು ರೋಸಿ ಹೋಗಿದ್ದಾರೆ. ಫಲಾನುಭವಿಗಳ ಆಯ್ಕೆಯಲ್ಲಿ ದೋಷ, ಮನೆ ನಿರ್ಮಾಣವಾದರೂ ಫಲಾನುಭವಿಗಳಿಗೆ ಹಂಚದೇ ವಿಳಂಬ, ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಜ್ಞಾವಂತರನ್ನು ನಾಚುವಂತೆ ಮಾಡಿದೆ. ಅಲ್ಲದೆ ಕೆಲವು ಕಡೆ ‘ಇದ್ದವರಿಗೂ ತಮಗೂ, ತನ್ನವರಿಗೂ ಒಂದು ಮನೆ’ ಎಂಬಂತೆ ನೀಡಿದ ಘಟನೆಗಳು ಕೂಡಾ ನಡೆದು ವಾಗ್ವಾದಕ್ಕೆ ಕಾರಣವಾಗಿವೆ.

ಗೃಹಮಂಡಳಿ: ಗೃಹಮಂಡಳಿ ವತಿಯಿಂದ ಬೆಳವಿನಾಳ ಸಮೀಪ ರಸ್ತೆ, ಚರಂಡಿ ಸೇರಿದಂತೆ ಎಲ್ಲ ವ್ಯವಸ್ಥೆ ಒದಗಿಸಿ ₹50 ಕೋಟಿ ವೆಚ್ಚದಲ್ಲಿ ಸುಂದರವಾದ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆ ಮನೆಗಳು ಸಂಬಂಧಿಸಿದವರಿಗೆ ಹಸ್ತಾಂತರ ವಾಗಲೇ ಇಲ್ಲ. ಕಿಟಿಕಿ, ಬಾಗಿಲು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಭಾಗ್ಯನಗರದ ರೈಲು ಹಳಿ ಸಮೀಪ 20 ಎಕರೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿದ ನಿವೇಶನಗಳು ಹಾಗೆ ಬಿದ್ದಿವೆ.

ನಗರಾಭಿವೃದ್ಧಿ ಪ್ರಾಧಿಕಾರ: ಅಸ್ತಿತ್ವಕ್ಕೆ ಬಂದಾಗಿನಿಂದ ಇದು ಜಮೀನು ಖರೀದಿ ಹಾಗೂ ಮಾರಾಟಕ್ಕೆ ಮಾತ್ರ ಸೀಮಿತವಾಗಿದೆ. ಮಾದರಿ ಬಡಾವಣೆ ನಿರ್ಮಿಸಿ ಅರ್ಹರಿಗೆ ಕಡಿಮೆ ಹಣದಲ್ಲಿ ನೀಡಿ ಉದಾರತೆಯನ್ನು ಪ್ರಾಧಿಕಾರ ಮೆರೆದಿಲ್ಲ. ಬದಲಾಗುವ ಸರ್ಕಾರಗಳ ಹಿಂಬಾಲಕರು ಅಧ್ಯಕ್ಷ ಸ್ಥಾನವನ್ನು ವಹಿಸಿದರೆ ಮುಗಿಯಿತು. ಸೀಟಿನ ಮೇಲೆ ಕುಳಿತುಕೊಂಡೇ ಧನ್ಯತಾಭಾವ ಅನುಭವಿಸುವ ಜಾಡ್ಯದಿಂದ ಜನಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಆಶ್ರಯ, ಆವಾಸ್ ಯೋಜನೆ: ಸರ್ಕಾರ ರೂಪಿಸಿದ ಉತ್ತಮ ಯೋಜನೆಗಳಿವು. ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡದ ಪರಿಣಾಮ ಒಂದೇ ಒಂದು ಮನೆ ನಿರ್ಮಿಸಿ ಹಸ್ತಾಂತರಿಸಿಲ್ಲ.

ಗ್ರಾಮೀಣ ಭಾಗದಲ್ಲಿ ಜಮೀನು ಖರೀದಿಸಿ ಬಿಪಿಎಲ್ ಮತ್ತು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಮನೆಯನ್ನು ಕಲ್ಪಿಸುವ ಯೋಜನೆಗೆ ಫಲಾನುಭವಿಗಳ ಪಟ್ಟಿಯನ್ನು ಪಂಚಾಯಿತಿ ಮಟ್ಟದಲ್ಲಿ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ಇದಕ್ಕೆ ಅನುದಾನದ ಕೊರತೆ ಇದೆ. ಪಟ್ಟಣ ಮತ್ತು ನಗರಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಎರಡು ರೀತಿ ಇದೆ.

ಈಗಾಗಲೇ ಮನೆಯನ್ನು ಹೊಂದಿದ್ದರೆ ಅದು ಶಿಥಿಲಗೊಂಡು ವಾಸಕ್ಕೆ ತೊಂದರೆಯಾಗುತ್ತಿದ್ದರೆ ಕಚ್ಚಾ ಮನೆ, ಪಕ್ಕಾ ಮನೆ ಹೆಸರಿನಲ್ಲಿ ಅದನ್ನು ಜಿಪಿಎಸ್‌ ಸಂಬಂಧಿಸಿದ ದಾಖಲೆಗಳನ್ನು ನೀಡಿ ನವೀಕರಣ ಪುನರ್‌ ನಿರ್ಮಾಣಕ್ಕೆ ₹1.50 ಲಕ್ಷದಿಂದ ₹3 ಲಕ್ಷದವರೆಗೆ ತಕ್ಷಣ ಹಣ ನೀಡಬಹುದಾಗಿದೆ. ಆದರೆ ಇಂತಹ ಕೆಲಸಗಳನ್ನು ಯಾವುದೇ ಸ್ಥಳೀಯ ಸಂಸ್ಥೆಗಳು ಮಾಡಿಲ್ಲ.

ಅಲ್ಲದೆ ಬಹುಮಹಡಿ ಕಟ್ಟಡದ ರೀತಿ ಪ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಿ ನಗರದ ಬಡ ಜನತೆಗೆ ಹಂಚಬಹುದು. ಆದರೆ ಅಂತಹ ಯಾವುದೇ ಕಟ್ಟಡ ನಿರ್ಮಾಣವಾಗಿಲ್ಲ. ಜಮೀನು ಲಭ್ಯವಿಲ್ಲ. ಅನುದಾನ ಬಂದಿಲ್ಲ. ನಗರದ ಸಮೀಪದ ಮತ್ತು ಆಸುಪಾಸಿನ 1 ಎಕರೆ ಜಮೀನಿಗೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ₹50 ಲಕ್ಷದಿಂದ ₹1 ಕೋಟಿವರೆಗೆ ಬೆಲೆ ಇದೆ. ಸರ್ಕಾರ ₹10 ರಿಂದ ₹20 ಲಕ್ಷಕ್ಕೆ ಕೇಳುತ್ತದೆ. ಮಾಲೀಕರು ನೀಡಲು ತಯಾರಿಲ್ಲ. ಒತ್ತಾಯದಿಂದ ಪಡೆಯಲೂ ಬರುವುದಿಲ್ಲ ಎನ್ನುವ ಕಾರಣಗಳನ್ನು ನೀಡಲಾಗುತ್ತಿದೆ.

ಈಗಾಗಲೇ ಇರುವ ಸರ್ಕಾರಿ ಜಮೀನುಗಳು ವಿವಿಧ ಸಂಸ್ಥೆಗಳ ಹೆಸರಿನಲ್ಲಿ ಇವೆ. ಇದ್ದರೂ ಬಹುಕೋಟಿ ಬೆಲೆಯ ಜಾಗಗಳನ್ನು ಆದಾಯ ತರದ ಬಡವರ ಮನೆನಿರ್ಮಾಣಕ್ಕೆ ನೀಡುವ ಯೋಚನೆ ಇಲ್ಲ. ಜಿಲ್ಲೆಯಲ್ಲಿ ಸದ್ಯ 5 ಸಾವಿರ ಮನೆಗಳ ಅವಶ್ಯಕತೆ ಇದೆ. ಆದರೆ ಯಾವುದೇ ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.