ಕೊಪ್ಪಳ: ಒಂದೆಡೆ ಕೊರೆಯುವ ಚಳಿ, ಮತ್ತೊಂದೆಡೆ ತುಂತುರು ಮಳೆಯ ಸಿಂಚನದ ನಡುವೆ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಗೆ ಗುರುವಾರ ಲಕ್ಷಾಂತರ ಭಕ್ತರು ಭೇಟಿ ನೀಡಿದರು.
ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರದಂದು ಹುಲಿಗಿ ಕ್ಷೇತ್ರಕ್ಕೆ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಶಕ್ತಿ ಯೋಜನೆಯಿಂದ ಬಸ್ ಪ್ರಯಾಣ ಉಚಿತವಾದ ಬಳಿಕ ಮಹಿಳೆಯರ ಸಂಖ್ಯೆ ಮೊದಲಿಗಿಂತಲೂ ಈಗ ಮತ್ತಷ್ಟು ಹೆಚ್ಚಾಗಿದ್ದು, ಹೊಸ್ತಿಲ ಹುಣ್ಣಿಮೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಬೆಳಗಿನ ಜಾವ ವಿಪರೀತ ಎನ್ನುವಷ್ಟರ ಮಟ್ಟಿಗೆ ಚಳಿಯಿತ್ತು. ಅದನ್ನು ಲೆಕ್ಕಿಸದೆ ಅಪಾರ ಪ್ರಮಾಣದ ಭಕ್ತರು ಬುಧವಾರ ರಾತ್ರಿಯೇ ಹುಲಿಗಿಗೆ ಬಂದು ತಂಗಿದ್ದರು. ಗುರುವಾರ ಚಳಿಯಲ್ಲಿಯೇ ದೇವಸ್ಥಾನದ ಮುಂಭಾಗದ ವಿಶಾಲ ಆವರಣದಲ್ಲಿ ಹೊದ್ದು ಮಲಗಿದ್ದ ಚಿತ್ರಣ ಕಂಡುಬಂದಿತು. ಸೂರ್ಯೋದಯಕ್ಕೂ ಮೊದಲು ಸುರಿದ ತುಂತುರು ಮಳೆಯಿಂದಾಗಿ ಅನೇಕರು ಎಚ್ಚರಗೊಂಡು ದೇವಿಯ ದರ್ಶನಕ್ಕೆ ಅಣಿಗೊಂಡರು. ಶುಕ್ರವಾರವೂ ಭಕ್ತರು ಹುಲಿಗಿ ಸನ್ನಿಧಿಯಲ್ಲಿಯೇ ಉಳಿದುಕೊಳ್ಳಲಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹುಬ್ಬಳ್ಳಿ, ಗದಗ, ಬಳ್ಳಾರಿ ಹಾಗೂ ಹೊಸಪೇಟೆ ಮಾರ್ಗದಿಂದ ಒಂದೊಂದೇ ರೈಲುಗಳು ಹುಲಿಗಿಗೆ ಬರುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.
ಸರಾಗ ದರ್ಶನಕ್ಕೆ ವ್ಯವಸ್ಥೆ
ಶೀಗಿ ಹುಣ್ಣಿಮೆಯ ಬಳಿಕ ಜಿಲ್ಲಾಡಳಿತ ಹುಲಿಗಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿ ರಸ್ತೆಗೆ ಬಂದು ವ್ಯಾಪಾರ ಮಾಡುತ್ತಿದ್ದ ಕೆಲಸಕ್ಕೆ ಕಡಿವಾಣ ಹಾಕಿತ್ತು. ರಸ್ತೆ ಮೇಲಿದ್ದ ಅಂಗಡಿಗಳನ್ನು ತೆರವು ಮಾಡಿಸಿದ್ದರಿಂದ ಭಕ್ತರ ಓಡಾಟ ಈಗ ಸುಲಭವಾಗಿದೆ. ದೇವಸ್ಥಾನದ ಮುಖ್ಯದ್ವಾರದಲ್ಲಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಾರ್ವಜನಿಕರ ಹಾಗೂ ಗಣ್ಯ ವ್ಯಕ್ತಿಗಳ ದರ್ಶನಕ್ಕೆ ಪ್ರತ್ಯೇಕ ಪಥ ಮಾಡಿದ್ದರಿಂದ ಸಾರ್ವಜನಿಕರಿಗೂ ದರ್ಶನದ ಭಾಗ್ಯ ಸುಲಭವಾಗಿ ಲಭಿಸುತ್ತಿದೆ.
ಬುಧವಾರವಷ್ಟೇ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಲಕ್ಷಾಂತರ ಭಕ್ತರು ಮಾಲೆ ವಿಸರ್ಜನೆ ಮಾಡಿ ಬಹಳಷ್ಟು ಜನ ವಾಪಸ್ ತಮ್ಮೂರಿಗಳಿಗೆ ತೆರಳಿದರೆ ಇನ್ನೂ ಕೆಲವರು ಹುಲಿಗಿಯಲ್ಲಿ ಉಳಿದುಕೊಂಡು ದೇವಿಯ ದರ್ಶನ ಪಡೆಯಲು ಬಂದಿದ್ದು ಚಿತ್ರಣ ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.