ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ, ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು ನಗದು ಸಂಗ್ರಹ ಕೋಟಿ ದಾಟಿದೆ.
ಬುಧವಾರ ಮತ್ತು ಗುರುವಾರ ಎರಡು ದಿನ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು ₹ 1,11,43, 435 ನಗದು ಸಂಗ್ರಹವಾಗಿದ್ದು, ಇದರ ಜೊತೆಗೆ 333 ಗ್ರಾಂ ಚಿನ್ನ ಮತ್ತು 11.3 ಕಿಲೋ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದು 54 ದಿನಗಳ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮಾಹಿತಿ ನೀಡಿದರು.
ಹುಣ್ಣಿಮೆಯ ದಿನ ಜನಸಾಗರ:
ಶಕ್ತಿ ದೇವತೆಯ ಆರಾಧನೆ ಮತ್ತು ದರ್ಶನಕ್ಕೆ ಹುಣ್ಣಿಮೆ ಪ್ರಶಸ್ತವಾದ ದಿನ ಎಂಬುದು ನಂಬಿಕೆ. ಅದರಂತೆ ಗೌರಿ ಹುಣ್ಣಿಮೆ ಮತ್ತು ಹೊಸ್ತಿಲ ಹುಣ್ಣಿಮೆಯ ದಿನ ಎರಡರಿಂದ ಮೂರು ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು. ಕಾರ್ತಿಕ ದೀಪೋತ್ಸವಕ್ಕೆ ಕೂಡ ಸಾವಿರಾರು ಭಕ್ತರು ಬಂದಿದ್ದರು.
ಹುಂಡಿಗೆ ಶಕ್ತಿ ತುಂಬಿದ ಶಕ್ತಿ ಯೋಜನೆ:
ರಾಜ್ಯ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದು, ಮಹಿಳೆಯರ ದೇವಸ್ಥಾನ, ಪ್ರವಾಸಿ ತಾಣಗಳ ದರ್ಶನ ಗಣನೀಯವಾಗಿ ಏರಿಕೆಯಾಗಿದೆ.
ಅಂಜನಾದ್ರಿಯ ಸೆರಗು:
ಈಚೆಗೆ ಪ್ರಸಿದ್ಧಿ ಪಡೆದಿರುವ ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಹನುಮ ಮಾಲಾಧಾರಿಗಳು ಭೇಟಿ ನೀಡಿದ್ದರು. ಇದೇ ಮಾರ್ಗದಲ್ಲಿ ಸಾಗಿದ ಪಾದಯಾತ್ರಿಗಳು ಮತ್ತು ಭಕ್ತರಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಕೂಡ ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.