ADVERTISEMENT

ಗಂಧಾಕ್ಷತೆಗೆ ಸೀಮಿತ ಜಾತಿ ಹೆಸರು ಪ್ರಸ್ತಾಪದ ಆರೋಪ: ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಮೇ 2024, 4:05 IST
Last Updated 24 ಮೇ 2024, 4:05 IST

ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಗಂಧಾಕ್ಷತೆ ವೇಳೆ ಸೀಮಿತ ಜಾತಿ ಹೆಸರು ಬಳಸಿ ಕೆಲ ಜಾತಿಯ ಹೆಸರು ಕೈ ಬಿಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಕಾರಣಕ್ಕಾಗಿ ವಾಗ್ವಾದ ನಡೆದಿದೆ. 

ಗಂಧಾಕ್ಷತೆ ವಿಚಾರದಲ್ಲಿ ದೇವಸ್ಥಾನದ ಅರ್ಚಕರು ತಾರತಮ್ಯ ಮಾಡುತ್ತಿದ್ದಾರೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವೀರೇಶ ಎಂಬುವವರು ಈ ಹಿಂದೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವರ ನೀಡುವಂತೆ ಕೇಳಿ ಜಿಲ್ಲಾಡಳಿತ ದೇವಸ್ಥಾನದ ಇಒ ಅವರಿಗೆ ಪತ್ರ ಬರೆದಿತ್ತು. 

ಗಂಧಾಕ್ಷತೆ ಎಂಬುದು ಪೂಜಾ ಕೈಂಕರ್ಯದ ಕಾರ್ಯವಿಧಾನವಾಗಿದ್ದು ವೈದಿಕ ಬ್ರಾಹ್ಮಣರು, ದೇಸಾಯಿ, ಸರ್ಕಾರದವರು, ಅಯ್ಯನವರು ಹೀಗೆ ಉಪನಾಮ ಹೇಳಿ ಪೂಜೆ ಸಲ್ಲಿಸಲಾಗುತ್ತದೆ. ಬೇರೆ ಜಾತಿಯವರ ಹೆಸರು ಬಳಸದೆ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದು ಒಂದು ಗುಂಪಿನವರ ಆಕ್ಷೇಪವಾಗಿತ್ತು. ಅರ್ಚಕರು ಈ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದ್ದು ಇದೇ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದೆ.

ADVERTISEMENT

ಆಗ ಕೊಪ್ಪಳ ತಹಶೀಲ್ದಾರ್‌ ವಿಠ್ಠಲ ಚೌಗುಲಾ, ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಎಲ್ಲರನ್ನೂ ಸಮಾಧಾನಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಹುಲಿಗೆಮ್ಮ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗೊಂಡಿ ‘ದೇವಸ್ಥಾನ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಅದರ ನಿಯಮದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾರಿಗೂ ತಾರತಮ್ಯ ಮಾಡಿಲ್ಲ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.