
ಕೊಪ್ಪಳ: ತಾಲ್ಲೂಕಿನ ಹುಲಿಗಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ನಿಲ್ಲಿಸಿ ಪಾರಂಪರಿಕ ಮಾರುಕಟ್ಟೆ ಎಂದು ಘೋಷಿಸಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಎಐಯುಟಿಯುಸಿ (ಸಂಯೋಜಿತ) ಮುಂದಾಳತ್ವದಲ್ಲಿ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘ ಮತ್ತು ಹುಲಿಗಿ ಬೀದಿ ಬದಿ ವ್ಯಾಪಾರಸ್ಥರ ಸಂಘಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಮಂಜುನಾಥ್ ಕೈದಾಳ ‘ಪ್ರಸಿದ್ಧ ಹುಲಿಗಿ ಕ್ಷೇತ್ರ ಸುಮಾರು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ್ದು, ವ್ಯಾಪಾರಸ್ಥರ ಕುಟುಂಬಗಳು ತಲಾ ತಲಾಂತರಗಳಿಂದ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿವೆ. ಭಕ್ತರಿಗೆ ಪೂಜಾ ಸಾಮಗ್ರಿಗಳನ್ನು ಒದಗಿಸುತ್ತಿವೆ. ಸಂಚಾರ ದಟ್ಟಣೆ ನಿರ್ವಹಣೆ ಸಮಸ್ಯೆಯಿಂದಾಗಿ ಜನಸಂದಣಿ ಉಂಟಾಗಿದ್ದರಿಂದ ಅದರ ಹೊಣೆಗಾರಿಕೆಯನ್ನು ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಹಾಕಲಾಗಿದೆ. ಇದರಿಂದ ಸಾಕಷ್ಟು ಸಾಮಗ್ರಿಗಳು ಹಾಳಾಗಿ ಆರ್ಥಿಕ ನಷ್ಟ ಉಂಟಾಗಿದೆ’ ಎಂದರು.
ಕಾರ್ಮಿಕ ಮುಖಂಡ ಶರಣು ಗಡ್ಡಿ ಮಾತನಾಡಿ ‘ದೊಡ್ಡ ಜನಸ್ತೋಮ ನಿರೀಕ್ಷಿತವಾಗಿದ್ದರೂ ಆಡಳಿತ ಯಾವುದೇ ಭದ್ರತೆ, ಬ್ಯಾರಿಕೇಡ್ ಅಥವಾ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸ್ಪಷ್ಟ ನಿರ್ಲಕ್ಷ್ಯವಾಗಿದೆ. ಈ ನಿರ್ಲಕ್ಷ್ಯದಿಂದ ಉಂಟಾದ ಸಮಸ್ಯೆಗೆ ಬೀದಿಬದಿ ವ್ಯಾಪಾರಿಗಳನ್ನು ಹೊಣೆ ಮಾಡಲಾಗಿದೆ’ ಎಂದರು.
ಸಂಘದ ಸಂಘಟನಾ ಕಾರ್ಯದರ್ಶಿ ಮಂಜುಳಾ, ಮುಖಂಡರಾದ ಕೌಶಲ್ಯ ದೊಡ್ಡಗೌಡರ, ಕೃಷ್ಣಮೂರ್ತಿ, ಅನಿಲ್ ಅಂಬರೀಶ್, ಶಿವಪುತ್ರಪ್ಪ, ಭಾಗ್ಯಮ್ಮ, ಯಮನೂರಪ್ಪ, ಹುಲಿಗೆಮ್ಮ, ರಾಘವೇಂದ್ರ ಶಿವಪ್ಪ, ನೇತ್ರಾವತಿ ಪಾರ್ವತಿ ಹಾಗೂ ವ್ಯಾಪಾರಿಗಳು ಪಾಲ್ಗೊಂಡಿದ್ದರು.
ಸೀಗೆ ಹುಣ್ಣಿಮೆಯ ಇತ್ತೀಚೆಗೆ ಲಕ್ಷಾಂತರ ಭಕ್ತರು ಹುಲಿಗಿಗೆ ಭೇಟಿ ನೀಡಿದ್ದರಿಂದ ಭಾರಿ ಜನಸಂದಣಿ ಉಂಟಾಗಿ ಜನ ಪರದಾಡುವಂತೆ ಆಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.