ADVERTISEMENT

ಹುಲಿಹೈದರ: ಮೊಹರಂ ಆಚರಣೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:48 IST
Last Updated 8 ಜುಲೈ 2025, 5:48 IST
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೊಹರಂ ಕೊನೆಯ ದಿನವಾದ ಭಾನುವಾರ ನಡೆದ ಪಂಜಾಗಳ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೊಹರಂ ಕೊನೆಯ ದಿನವಾದ ಭಾನುವಾರ ನಡೆದ ಪಂಜಾಗಳ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು   

ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೊಹರಂ ಅನ್ನು ಗ್ರಾಮಸ್ಥರು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು.

ಎರಡು ವರ್ಷಗಳ ಹಿಂದೆ ಮೊಹರಂ ನಂತರ ನಡೆದ ಗಲಾಟೆಯಿಂದಾಗಿ ಜಿಲ್ಲಾಧಿಕಾರಿ ಮೊಹರಂ ಆಚರಣೆಗೆ ನಿಷೇಧ ಹೇರಿದ್ದರು.

ತಾಲ್ಲೂಕು ಮಟ್ಟದ ಅಧಿಕಾರಿಗಳ‌ ನೇತೃತ್ವದಲ್ಲಿ ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಕಳೆದ ಹಲವು ನಿರ್ಬಂಧಗಳನ್ನು ಏರಿ ಆಚರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಆಚರಣೆಯಲ್ಲಿ ಕಳೇ ಇರಲಿಲ್ಲ.

ADVERTISEMENT

ಈ ವರ್ಷ ಗ್ರಾಮದ ಪ್ರತಿಯೊಂದು ಸಮಾಜದ ಮುಖಂಡರು ಮೊಹರಂ ಆಚರಣೆಗೆ ವಿಧಿಸಿದ್ದ ನಿರ್ಬಂಧ ತೆರವು ಗೊಳಿಸಿ ಆಚರಣೆಗೆ ಅನುಮತಿ ಕೋರಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಲ್ಲೂಕು ಪಂಚಾಯಿತಿ ಪ್ರಭಾರ‌ ಇಒ ರಾಜಶೇಖರ ಹಾಗೂ ಪಿಐ ಎಂ.ಡಿ.‌ಫೈಜುಲ್ಲಾ ಅವರು ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಮೊಹರಂ ಸಮಯದಲ್ಲಿ ಕೈಯಲ್ಲಿ ಬಡಿಗೆ, ಕೋಲು, ಕಬ್ಬಿಣ ಹಾಗೂ ಇತರೆ ಆಯುಧಗಳನ್ನು ಹಿಡಿಯಬಾರದು ಎನ್ನುವ ಷರತ್ತಿನ ಮೇಲೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು.

ಸಂಜೆ ಅಲಾಯಿ ದೇವರುಗಳ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿ ಐತಿಹಾಸಿಕ ಮೊಹರಂಗೆ ಸಾಕ್ಷಿಯಾದರು. ಗ್ರಾಮದ ಯುವಕರು, ಮುಖಂಡರು, ಜನಪ್ರತಿನಿಧಿಗಳು, ಚಿಕ್ಕ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ: ಮುಸ್ಲಿಂ ಸಮಾಜದವರು ಇಲ್ಲದ ಅಡವಿಬಾವಿ ಗ್ರಾಮದಲ್ಲಿ ಭಾನುವಾರ ಮೊಹರಂ ಅನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆರು ದಿನ ನಡೆಯುವ ಮೊಹರಂಗೆ ಪಕ್ಕದ ಸೋಮಸಾಗರದಿಂದ ನೂರಸಾಬ್ ಕಮ್ಮಾರ ಎಂಬುವವರನ್ನು ಮುಜವಾರನನ್ನಾಗಿ ನೇಮಕ ಮಾಡಲಾಗುತ್ತಿದೆ.

ನೆಟೆಗುಡ್ಡ ಎಂಬುವವರ ಮನೆತನದವರು ಪೂಜಾರಿಯಾಗಿ ಸೇವೆ ಮಾಡುತ್ತಿದ್ದಾರೆ. ಈ ಗ್ರಾಮ ಚಿಕ್ಕದಾಗಿದ್ದರೂ ಅದ್ದೂರಿಯಾಗಿ ಜರುಗಲು ಅಡವಿಬಾವಿ ದೊಡ್ಡ ತಾಂಡಾ, ಚಿಕ್ಕ ತಾಂಡಾ, ಹುಲಸನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಇಲ್ಲಿಗೆ ಬಂದು ಹಬ್ಬ ಮುಗಿಯುವವರೆಗೂ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಭಾನುವಾರ ಮೊಹರಂ ಕೊನೆಯ ದಿನದಂದು ಭಕ್ತರು ಪೂಜೆ ಸಲ್ಲಿಸಿ ಹರಿಕೆ ಸಮರ್ಪಿಸಿದರು. ಅಲಾಯಿ ಕುಣಿತ, ಹೆಜ್ಜೆ ಕುಣಿತ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.