
ಪ್ರಾತಿನಿಧಿಕ ಚಿತ್ರ
ಕೊಪ್ಪಳ: ನಗರದ ಐತಿಹಾಸಿಕ ಹುಲಿಕೆರೆಗೆ ತೆರಳುವ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾದ ಆರೋಪ ಹೊತ್ತ ಮರಂ ರಸ್ತೆ ತೆರವು ಕಾರ್ಯಾಚರಣೆಗೆ ಹಲವರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ವಾರದಲ್ಲಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಅವರಿಗೆ ಸೂಚಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ವಿಷಯದ ಕುರಿತು ವಾಗ್ವಾದ ನಡೆದಿತ್ತು. ಬಿಜೆಪಿಯ ವಿಧಾಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರ ಮುಂದಾಳತ್ವದಲ್ಲಿ ರಸ್ತೆ ತೆರವು ಮಾಡಬೇಕು ಎಂದು ಆಗ್ರಹಿಸಿದ್ದರು. ಈ ಕುರಿತು ಬಿಜೆಪಿ ನಿಯೋಗದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಇದರಿಂದ ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದಾಗ ಅಡ್ಡಿ ಉಂಟಾಯಿತು. 88 ಎಕರೆ ವಿಶಾಲವಾದ ಕೆರೆ ಒತ್ತುವರಿ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಕೆಲವರು ಹುಲಿಕೆರೆಗೆ ತೆರಳುವ ಮಾರ್ಗದಲ್ಲಿ ಮೊದಲೇ ರಸ್ತೆಯಿತ್ತು. ಒತ್ತುವರಿಯಾಗಿದ್ದರೆ ಎಲ್ಲವನ್ನೂ ಸರ್ವೆ ಮಾಡಿ ಎಂದು ಆಗ್ರಹಿಸಿದರು. ಇದರಿಂದಾಗಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಿತು. ಆದ್ದರಿಂದ ಸಂಪೂರ್ಣವಾಗಿ ಸರ್ವೆ ಮಾಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ತಿಳಿಸಿದರು.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಂಸದ ರಾಜಶೇಖರ ಹಿಟ್ನಾಳ ’ಶಿವರಾತ್ರಿ ಅಂಗವಾಗಿ ಹುಲಿಕೆರೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರೋತ್ಸವ ಕಾರ್ಯಕ್ರಮದಲ್ಲಿ ಹೇಮಲತಾ ನಾಯಕ ಕೂಡ ಪಾಲ್ಗೊಂಡಿದ್ದರು. ಆಗ ಸುಮ್ಮನಿದ್ದು ಈಗ ವಿನಾಕಾರಣ ಗಲಾಟೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ಧಿ ಕಾರ್ಯ ನಡೆಯುವುದನ್ನು ಸಹಿಸಲು ಆಗುವುದಿಲ್ಲ. ಯಾವ ಅಧಿಕಾರಿಯ ಮೇಲೂ ಒತ್ತಡ ಹೇರಿಲ್ಲ, ಕಾನೂನು ಪ್ರಕಾರವೇ ಅವರು ಕರ್ತವ್ಯ ನಿರ್ವಹಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.