ಗಂಗಾವತಿ: ‘ಕೊಪ್ಪಳ ಜಿಲ್ಲೆಗೆ ಶೀಘ್ರದಲ್ಲೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಸಮಯ ನಿಗದಿಪಡಿಸಿ ಕಿಷ್ಕಿಂಧಾ ಜಿಲ್ಲಾ ನಿಯೋಗವನ್ನು ಸಿಎಂಗೆ ಭೇಟಿ ಮಾಡಿಸಿ ನೂತನ ಜಿಲ್ಲೆ ರಚನೆ ಬಗ್ಗೆ ಚರ್ಚಿಸೋಣ’ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದ ಸಂಸದರ ನಿವಾಸಕ್ಕೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ತೆರಳಿ ಸಂಸದರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದರು.
‘ಗಂಗಾವತಿ ನೂತನ ಜಿಲ್ಲೆ ಆಗಬೇಕಿದೆ. ಇದಕ್ಕೆ ನನ್ನ ಸಹಮತ, ಬೆಂಬಲ ಎರಡೂ ಇದೆ. ಗಂಗಾವತಿ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಇನ್ನೂ ಹೊಂದುತ್ತಿದೆ. ಕಿಷ್ಕಿಂಧಾ ಜಿಲ್ಲೆ ರಚನೆಗೆ ನಾನು ಸಹ ನನ್ನಿಂದ ಆಗುವ ಶ್ರಮ ನೀಡುವೆ’ ಎಂದರು.
ನಂತರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಸುರೇಶ ಸಿಂಗನಾಳ, ಆಲಂಪಲ್ಲಿ ಜಗನ್ನಾಥ, ಸರ್ವೇಶ್ ವಸ್ತ್ರದ, ನಾಗರಾಜ ಗುತ್ತೇದಾರ ಮಾತನಾಡಿ, ‘ಸಂಸದರು ಸಿಎಂ ಅವರನ್ನು ಭೇಟಿ ಮಾಡಿಸಲು ಬೆಂಗಳೂರಿಗೆ ಜಿಲ್ಲಾ ನಿಯೋಗ ಕೊಂಡೊಯ್ಯಬೇಕು. ಈ ನಿಯೋಗದಲ್ಲಿ ಕ್ಷೇತ್ರದ ಹಾಲಿ, ಮಾಜಿ ಚುನಾಯಿತ ಪ್ರತಿನಿಧಿಗಳು, ಸರ್ವ ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ.
‘ಅಲ್ಲದೇ ನೂತನ ಜಿಲ್ಲೆಗಳ ರಚನೆ ಮಾಹಿತಿಯನ್ನು ಇದೇ ಡಿಸಂಬರ್ 31ರೊಳಗೆ ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಸೂಚನೆ ನೀಡಿದ್ದು, ಕಿಷ್ಕಿಂಧಾ ಜಿಲ್ಲಾ ರಚನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿ, ಜಿಲ್ಲೆ ರಚನೆಯಾಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.
ಮನವಿಗೆ ಸಂಸದ ಸ್ಪಂದಿಸಿ, ‘ಕಿಷ್ಕಿಂಧಾ ಜಿಲ್ಲೆ ರಚನೆ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ, ಆ ಮನವಿ ರಾಜ್ಯಕ್ಕೆ ರವಾನೆಯಾಗುತ್ತದೆ. ರಾಜ್ಯದಿಂದಲೇ ಕೇಂದ್ರಕ್ಕೆ ಪ್ರಸ್ತಾವನೆ ಹೋಗಬೇಕು. ಈ ಕುರಿತು ಸಿಎಂಗೆ ಒಂದು ಅಲ್ಲ, ಎರಡ್ಮೂರು ಬಾರಿ ಗಮನಕ್ಕೆ ತರೋಣ. ಸಿಎಂ ಭೇಟಿಗಾಗಿ ಬೆಂಗಳೂರಿಗೆ ಹೋದರೆ 2-3 ನಿಮಿಷ ಸಮಯ ಕೊಡುತ್ತಾರೆ. ಅಲ್ಲಿ ಸಾಕಷ್ಟು ಮಾತನಾಡಲು ಅವಕಾಶವಿರಲ್ಲ. ಹಾಗಾಗಿ ಕೊಪ್ಪಳದಲ್ಲಿಯೇ ಹೆಚ್ಚಾಗಿ ಮಾತನಾಡೋಣ. ಜಿಲ್ಲೆಯಲ್ಲಿ ಭೇಟಿಯಾದರೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಸೇರಿದಂತೆ ಜಿಲ್ಲೆಯ ಚುನಾಯಿತರು ಭಾಗಿಯಾಗಲಿದ್ದಾರೆ. ಆಗ ಸಿಎಂಗೆ ಎಲ್ಲರೂ ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಲು ನೆರವಾಗುತ್ತದೆ’ ಎಂದರು.
ಮೊಹಮ್ಮದ್ ರಫಿ, ಶಿವಕುಮಾರ ಮಾಲಿಪಾಟೀಲ, ಅನ್ನಪೂರ್ಣ ಸಿಂಗ, ರಾಜೇಶ್ವರಿ, ಮಂಜುನಾಥ ಕಟ್ಟಿಮನಿ, ಶ್ರೀನಿವಾಸ ಎಂ.ಜೆ, ವೀರೇಶ ಮಡಿವಾಳರ, ಶಿವಕುಮಾರ ಎಲಿಗಾರ, ಸರ್ವಜ್ಞ, ಬಸವರಾಜ ಮಾನಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.