ಯಲಬುರ್ಗಾ: ತಾಲ್ಲೂಕಿನ ಮಕ್ಕಳ್ಳಿ ಗ್ರಾಮದ ಹೊರವಲಯದಲ್ಲಿರುವ ಪುರಾತನ ಕಾಲದ ಕಲ್ಲಿನಾಥ ದೇವಾಲಯದಲ್ಲಿ ನಂದಿ ವಿಗ್ರಹವು ಕಳವು ನಡೆದಿದೆ.
ಈ ಬಗ್ಗೆ ಬೇವೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಸ್ಥಾನದಲ್ಲಿನ ಈ ನಂದಿ ವಿಗ್ರಹ ಕಳವು ನಿಧಿಗಳ್ಳರು ಮಾಡಿರುವ ಕೃತ್ಯ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಸಂಜೆ ವೇಳೆ ದೇವಸ್ಥಾನದ ಕಡೆ ಜನರು ಬರುವುದಿಲ್ಲ. ಇದನ್ನು ಗಮನಿಸಿಯೇ ಯಾರೋ ವಿಗ್ರಹವನ್ನು ಕದ್ದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಒತ್ತಾಯ: ಗ್ರಾಮದ ಶಿವಾನಂದಮಠದ ಶಿವಾನಂದ ಸ್ವಾಮೀಜಿ, ನೀಲನಗೌಡ ಹೊಸ್ಮನಿ, ನಿಂಗರಾಜ ಹೊಸ್ಮನಿ, ಬಸಣ್ಣ ದಮ್ಮೂರ, ವೀರಭದ್ರಪ್ಪ ಪತ್ತಾರ, ದೇವಪ್ಪ ಆರೇರ, ಶೇಖರಗೌಡ ಪೊಲೀಸ್‍ಪಾಟೀಲ ಸೇರಿ ಇತರರು ಕಿಡಿಗೇಡಿಗಳು ಮಾಡಿರುವ ಕೃತ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಸರ್ಕಾರ ಹೊಸ ಮೂರ್ತಿಯ ಸ್ಥಾಪನೆಗೆ ಮುತುವರ್ಜಿ ತೋರಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.