ADVERTISEMENT

ಸಿಗಂದೂರು ದೇವಸ್ಥಾನ ವಶಪಡಿಸಿಕೊಂಡರೆ ತಕ್ಕ ಪಾಠ: ಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ

ಉತ್ತರ, ಕಲ್ಯಾಣ ಕರ್ನಾಟಕ ಆರ್ಯಈಡಿಗರ ಚಿಂತನ-ಮಂಥನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 21:16 IST
Last Updated 25 ಜುಲೈ 2021, 21:16 IST
ಭಾನುವಾರ ನಡೆದ ಆರ್ಯ ಈಡಿಗ ಸಮಾಜದ ಚಿಂತನ-ಮಂಥನ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿದರು.
ಭಾನುವಾರ ನಡೆದ ಆರ್ಯ ಈಡಿಗ ಸಮಾಜದ ಚಿಂತನ-ಮಂಥನ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿದರು.   

ಹೇಮಗುಡ್ಡ (ಕೊಪ್ಪಳ ಜಿಲ್ಲೆ): ‘ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾದರೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷಮಾಲೀಕಯ್ಯ ಗುತ್ತೇದಾರ ಎಚ್ಚರಿಕೆ ನೀಡಿದರು.

ಗಂಗಾವತಿ ತಾಲ್ಲೂಕಿನ ಹೇಮ ಗುಡ್ಡದ ದುರ್ಗಾದೇವಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಆರ್ಯ ಈಡಿಗರ ಸಮಾವೇಶದ ಚಿಂತನ-ಮಂಥನ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಯ ಈಡಿಗರ ಶಕ್ತಿ ಏನೆಂದು ಈಗಾಗಲೇ ತೋರಿಸಿದ್ದೇವೆ. ನಮ್ಮನ್ನು ಬಳಸಿಕೊಂಡು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಹೆಂಡ ಮಾರಾಟದ ಮೂಲಕ ಬದುಕು ಕಟ್ಟಿಕೊಂಡಿದ್ದ ಸಮಾಜದ ಜನರು ಇಂದು ಹಮಾಲಿ ಮಾಡುವ ಸ್ಥಿತಿ ತಲುಪಿದ್ದಾರೆ’ ಎಂದರು.

ADVERTISEMENT

ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ‘ರಾಜಕೀಯ ಪ್ರಾತಿನಿಧ್ಯ, ಸಮಾಜದ ಶಕ್ತಿ ಪ್ರದರ್ಶನಕ್ಕೆ ನಾವೆಲ್ಲ ಸಜ್ಜಾ ಗೋಣ. ಬಿಲ್ಲವ, ಪೂಜಾರಿ, ಈಳವ, ಈಡಿಗ ಎಂಬ 26 ಒಳಪಂಗಡ ಮರೆತು ನಮ್ಮ ಅಸ್ತಿತ್ವ ತೋರಿಸಬೇಕು’ ಎಂದರು.

ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿದರು.

ಅಭಿವೃದ್ಧಿ ನಿಗಮ, ಕೂಡಲಸಂಗಮದಲ್ಲಿ ಆರ್ಯಈಡಿಗ ಪೀಠ ಸ್ಥಾಪನೆಗೆ ಸ್ಥಳ, ಮುನಿರಾಬಾದ್‌ನಲ್ಲಿ ನಾರಾಯಣ ಗುರು ಶಿಕ್ಷಣ ಪೀಠ ಸ್ಥಾಪನೆಗೆ 70 ಎಕರೆ ಭೂಮಿ, ಅಧಿಕೃತ ಮದ್ಯ ಮಾರಾಟದಲ್ಲಿ ಸಮಾಜದವರಿಗೆ ಅವಕಾಶ, ಹೋರಾಟ ಸಮಿತಿ ರಚನೆ ಸೇರಿ 14 ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಪ್ರಣವಾನಂದ ಶ್ರೀ, ಬ್ರಹ್ಮಾನಂದ ಸ್ವಾಮೀಜಿ, ವಿಖ್ಯಾತನಂದ, ಸತ್ಯಾನಂದ ಸ್ವಾಮೀಜಿ, ಪ್ರಮುಖರಾದ ಎಚ್‌.ಆರ್‌.ಶ್ರೀನಾಥ, ಎಚ್‌.ಆರ್‌.ಗವಿಯಪ್ಪ, ಸತ್ಯಜಿತ್ ಸುರತ್ಕಲ್, ರಾಜಶೇಖರ ಕೋಟ್ಯಾನ್, ಭರತ್‌.ಎಸ್‌.ಎಸ್‌, ಹರಿಬಾಬು ಇದ್ದರು.

ಸಚಿವ ಗೈರು: ಬೇಳೂರು ವ್ಯಂಗ್ಯ

‘ಹಿಂದುತ್ವ, ಪಕ್ಷ ನಿಷ್ಠೆ ಎನ್ನುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಜಾತಿ ‘ಕೋಟಾ’ದಡಿ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಯಾರದೋ ಮೇಲಿನ ಭಯದಿಂದ ಅವರು ಸಮಾವೇಶಕ್ಕೆ ಗೈರಾಗಿದ್ದಾರೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು

‘ಸಮಾಜದ ಋಣ ಇರುವ ಸಚಿವರೇ ಮುಜರಾಯಿ ಇಲಾಖೆ ನಿಭಾಯಿಸು ತ್ತಿದ್ದಾರೆ. ಆದರೆ, ಸಮಾಜದವರಿಗೆ ಸೇರಿದ ಸಿಗಂದೂರು ಚೌಡೇಶ್ವರಿ ದೇವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಮಾಡು ತ್ತಿಲ್ಲ. ಅವರು ಸಮಾಜದ ಹಿತ ಹೇಗೆ ಕಾಯುತ್ತಾರೆ’ ಎಂದು ಪ್ರಶ್ನಿಸಿದರು.

***

ಬಂಗಾರಪ್ಪ ಅವರ ನಂತರ ಸಮಾಜವನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಹೋರಾಟದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿ ವಿಧಾನಸೌಧ ನಡುಗುವಂತೆ ಮಾಡಬೇಕು

- ಮಾಲೀಕಯ್ಯ ಗುತ್ತೇದಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.