ಗಂಗಾವತಿ (ಕೊಪ್ಪಳ ಜಿಲ್ಲೆ): ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಪಕ್ಷದ ಕಾರ್ಯಕರ್ತರು ನಗರದ ಗಾಂಧಿ ವೃತ್ತದ ಬಳಿ ಪಟಾಕಿ ಸಿಡಿಸಿ, ಬಣ್ಣದ ಓಕುಳಿ ಆಡಿ ಸಂಭ್ರಮಿಸಿದರು. ಸಿಂಗನಾಳ ವಿರೂಪಾಕ್ಷಪ್ಪ, ತಿಪ್ಪೇರುದ್ರಸ್ವಾಮಿ, ಈ. ರಾಮಕೃಷ್ಣ, ಪಂಪಣ್ಣ ನಾಯಕ, ರಮೇಶ ಚೌಡ್ಕಿ, ಯಮನೂರ ಚೌಡ್ಕಿ, ವೀರೇಶ ಬಲಕುಂದಿ, ಕಾಶಿನಾಥ ಚಿತ್ರಗಾರ, ರಾಚಪ್ಪ ಸಿದ್ದಪೂರ, ಉಮೇಶ ಸಿಂಗನಾಳ ಸೇರಿ ಮಹಿಳೆಯರು ಇದ್ದರು.
ಪಕ್ಷದ ಕಾರ್ಯಕರ್ತ ನಾಗರಾಜ ಚಳಗೇರಿ ಮಾತನಾಡಿ ‘ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್ ಸಿಬಿಐ ಕೋರ್ಟ್ ತಪ್ಪಿತಸ್ಥ ಎಂದು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಬಳಿಕ ಕೋರ್ಟ್ ಜಾಮೀನು ನೀಡಿದೆ. ಈ ಬೆಳವಣಿಗೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಖುಷಿ ತಂದಿದೆ. ಕೆಲವೇ ದಿನಗಳಲ್ಲಿ ರೆಡ್ಡಿ ಕ್ಷೇತ್ರಕ್ಕೆ ಬರಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.