ಕೊಪ್ಪಳ: ಗಂಗಾವತಿಯ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಅಕ್ರಮವಾಗಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಪ್ರಕರಣ ಬೆಳಕಿಗೆ ಬಂದ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲೆಯ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ.
ಗಂಗಾವತಿ ಪ್ರಕರಣದ ಬಳಿಕ ಆರು ದೂರುಗಳನ್ನು ದಾಖಲಿಸಿದ್ದು ಮುಂದಿನ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಅಕ್ಕಿಯನ್ನು ಆರಂಭದಲ್ಲಿ 11 ಕ್ವಿಂಟಲ್ ಮಾತ್ರ ಎಂದು ಅಧಿಕಾರಿಗಳು ಹೇಳಿದ್ದರು. ಲಾರಿಯಲ್ಲಿ ಅಕ್ಕಿಗಳ ಮೂಟೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಮರಳಿ ಪರಿಶೀಲಿಸಲಾಗಿದ್ದು 35 ಕ್ವಿಂಟಲ್ ಅಕ್ಕಿ ಎನ್ನುವುದು ಖಾತ್ರಿಯಾಗಿದೆ. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಜಿಲ್ಲೆಯಲ್ಲಿ ಮೇಲಿಂದ ಮೇಲೆ ಪಡಿತರ ಅಕ್ಕಿಗಳನ್ನು ಅಕ್ರಮವಾಗಿ ಮಾರಾಟ ಹಾಗೂ ಸಾಗಾಟ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ಅಳವಂಡಿ ಭಾಗದಲ್ಲಿ ಆಟೊದಲ್ಲಿ ಸಾಗಣೆ ಮಾಡುತ್ತಿದ್ದ 15 ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಈಗ ಕೊಪ್ಪಳದ ಕುರುಬರ ಓಣಿಯಲ್ಲಿ ಮಹಿಳೆಯೊಬ್ಬಳು ಪಡಿತರ ಅಂಗಡಿಯ ಪಕ್ಕದಲ್ಲೇ ಅನ್ನಭಾಗ್ಯ ಯೋಜನೆಯ ಫಲಾನಭವಿಗಳಿಂದ ಅಕ್ಕಿಯನ್ನು ಖರೀದಿ ಮಾಡುತ್ತಿದ್ದ ಪ್ರಕರಣವೂ ನಡೆದಿದ್ದು, ರಾತ್ರೊ ರಾತ್ರಿ ಅಧಿಕಾರಿಗಳು ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.
ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ರಾಜ್ಯ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಗೆ ನೀಡಿರುವ ಅಂಕಿಅಂಶಗಳ ಪ್ರಕಾರ 2021–22ರಲ್ಲಿ 23, 2022–23ರಲ್ಲಿ 26, 2023–24ರಲ್ಲಿ 14 ಮತ್ತು 2024–25ರಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಈ ವರ್ಷದಲ್ಲಿ 10 ಪ್ರಕರಣಗಳು ದಾಖಲಾಗಿದ್ದು, ಹಿಂದಿನ ಒಂದು ತಿಂಗಳ ಅವಧಿಯಲ್ಲಿ ಆರುದೂರುಗಳನ್ನು ದಾಖಲಿಸಲಾಗಿದೆ. ಒಟ್ಟು 16 ದೂರುಗಳು ಆಗಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅಧಿಕಾರಿಗಳ ವೈಫಲ್ಯ: ಇಲಾಖೆಯ ಅಧಿಕಾರಿಗಳಿಗೆ ಅಕ್ಕಿ ಅಕ್ರಮ ಸಾಗಾಟ ಹಾಗೂ ಮಾರಾಟದ ಕುರುಹು ಸಿಕ್ಕರೂ ನಿರ್ಲಕ್ಷ್ಯ ವಹಿಸಿದ್ದರಿಂದ ದೂರು ದಾಖಲಾದ ಪ್ರಮಾಣಗಳು ಕಡಿಮೆಯಾಗಿವೆ ಎಂದು ಸಂಘಟನೆಗಳ ಮುಖಂಡರು ಆರೋಪಿಸುತ್ತಾರೆ.
ಗಂಗಾವತಿ ಪ್ರಕರಣದ ಬಳಿಕ ಕೊಂಚ ಮಾಹಿತಿ ಸಿಕ್ಕರೂ ಪರಿಶೀಲಿಸುವ ಕೆಲಸ ನಡೆಯುತ್ತಿರುವ ಕಾರಣದಿಂದಲೇ ದೂರುಗಳು ದಾಖಲಾಗುತ್ತಿವೆ, ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಇಲಾಖೆಯ ಜಿಲ್ಲಾಕೇಂದ್ರದ ಅಧಿಕಾರಿಗಳು ಮೇಲಿಂದ ಮೇಲೆ ವರ್ಗಾವಣೆಯಾಗಿದ್ದು ಕೂಡ ಅಕ್ರಮ ಎಸಗುವವರಿಗೆ ಅನುಕೂಲವಾಗಿದೆ ಎನ್ನುತ್ತವೆ ಮೂಲಗಳು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಅವರನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲೆಯ ಉಪನಿರ್ದೇಶಕರನ್ನಾಗಿ ಹಿಂದೆ ನೇಮಿಸಲಾಗಿತ್ತು. ಗಂಗಾವತಿ ಪ್ರಕರಣದ ಬಳಿಕ ಅವರನ್ನು ಮಾತೃ ಇಲಾಖೆಗೆ ಕಳಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಇಲಾಖೆಯ ಜವಾಬ್ದಾರಿ ಹೆಚ್ಚುವರಿಯಾಗಿ ನೀಡಲಾಗಿದೆ.
ಅಕ್ಕಿ ಅಕ್ರಮ ಮಾರಾಟದ ದೂರು ಬಂದ ತಕ್ಷಣವೇ ಅಧಿಕಾರಿಗಳನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಲಾಗುತ್ತಿದೆ. ದಾಳಿ ಮಾಡಿದ್ದರಿಂದಲೇ ಒಂದು ತಿಂಗಳಲ್ಲಿ ದೂರುಗಳ ಸಂಖ್ಯೆ ಹೆಚ್ಚಾಗಿದೆ.
–ಸಿದ್ರಾಮೇಶ್ವರ ಹೆಚ್ಚುವರಿ ಜಿಲ್ಲಾಧಿಕಾರಿ
ಒಂದೂ ಪ್ರಕರಣದಲ್ಲಿ ಸಿಕ್ಕಿಲ್ಲ
ಗೆಲುವು ಅಕ್ಕಿ ಅಕ್ರಮ ಮಾರಾಟದ ಬಗ್ಗೆ ಇಲಾಖೆಯ ಅಧಿಕಾರಿಗಳು ದೂರುಗಳನ್ನು ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿದ್ದರೂ ಹಿಂದಿನ ಐದು ವರ್ಷಗಳಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾದ ಪ್ರಕರಣಗಳಲ್ಲಿ ಒಂದೂ ಸಾಬೀತಾಗಿಲ್ಲ. 2021ರಿಂದ 2024–25ರ ತನಕದ ಅವಧಿಯಲ್ಲಿ ಒಟ್ಟು 70 ದೂರುಗಳು ಸಲ್ಲಿಕೆಯಾಗಿದ್ದು 53 ಎಫ್‌ಐಆರ್ ದಾಖಲಾಗಿವೆ. ಇದರಲ್ಲಿ ಮುಕ್ತಾಯಗೊಂಡಿರುವ ಆರು ಪ್ರಕರಣಗಳಲ್ಲಿ ಸರ್ಕಾರಕ್ಕೆ ಒಂದೂ ಗೆಲುವು ಸಿಕ್ಕಿಲ್ಲ.
ಸಿಬ್ಬಂದಿ ಎದುರು ಇರಲಿಲ್ಲ; ವರದಿಯಲ್ಲಿ ಉಲ್ಲೇಖ
ಗಂಗಾವತಿ ಅಕ್ರಮ ಅಕ್ಕಿ ಸಾಗಾಟ ಆರೋಪದ ಪ್ರಕರಣದ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ತನಿಖೆ ನಡೆಸಿದ್ದು ಮಾಲೀಕನಿಗೆ ಅಕ್ಕಿ ವಾಪಸ್ ಕೊಡುವಾಗ ಇಲಾಖೆಯ ಅಧಿಕಾರಿಗಳು ಯಾರೂ ಎದುರು ಇರಲಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ. ಸರ್ಕಾರ ಗೋದಾಮಿನ ಅಧೀನದಲ್ಲಿ ಅಕ್ಕಿ ಇರುವಾಗಲೇ ಖಾಸಗಿ ವ್ಯಕ್ತಿ ತಮ್ಮ ಚೀಲದಲ್ಲಿ ಅಕ್ಕಿತುಂಬಿಕೊಳ್ಳುತ್ತಿದ್ದರು. ಆ ಚೀಲದ ಮೇಲೆ ವಿದೇಶದ ಹೆಸರು ಇತ್ತು ಎನ್ನುವ ಅಂಶವನ್ನೂ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿದೆ. ‘ಈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಮರೆ ಮಾಚಲಾಗಿದೆ ಎನ್ನುವ ಅಂಶವೂ ವಿಚಾರಣೆ ವೇಳೆ ಗೊತ್ತಾಗಿದೆ. ತಪ್ಪಿತಸ್ಥ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ. ಈಗ ಪೊಲೀಸರ ವಿಚಾರಣೆ ಬಾಕಿ ಉಳಿದಿದೆ’ ಎಂದು ಸಿದ್ರಾಮೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.