ಕೊಪ್ಪಳ: ’ರಾಜ್ಯ ಸರ್ಕಾರ ತರಾತುರಿಯಲ್ಲಿ ಮಾಡುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯಿಂದಾಗಿ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ’ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆ ಮಾಡಿಸಲಾಗುತ್ತಿದೆ. ಯಾವ ಸಮುದಾಯದ ಜನ ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೊ; ಆ ಸಮುದಾಯದ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ’ ಎಂದರು.
‘ಆಯೋಗ ಈಗಾಗಲೇ ಸಾಕಷ್ಟು ಲೋಪಗಳನ್ನು ಮಾಡಿದ್ದು, ಇನ್ನಷ್ಟು ಸಮಯ ತೆಗೆದುಕೊಂಡು ಮಾಡಿದ್ದರೆ ವೈಜ್ಞಾನಿಕವಾಗಿ ವರದಿ ಬರುತ್ತಿತ್ತು. ಹಿಂದಿನ ವರದಿ ಅವೈಜ್ಞಾನಿಕವಾಗಿದೆ ಎನ್ನುವ ಕಾರಣಕ್ಕೆ ಅನುಷ್ಠಾನ ಮಾಡಿಲ್ಲ. ಈಗಿನ ವರದಿಯದ್ದೂ ಅದೇ ಪರಿಸ್ಥಿತಿಯಾಗುವ ಆತಂಕವಿದೆ. ದಸರಾ ಹಿಂದೂಗಳ ಹಬ್ಬವಾಗಿದ್ದು, ಹಬ್ಬದ ಸಮಯದಲ್ಲಿ ಈ ಸಮೀಕ್ಷೆಯ ಅಗತ್ಯವಾದರೂ ಏನಿತ್ತು’ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಏಕತಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ ’ಅಲ್ಲಿ ನಡೆದಿದ್ದು ಬೇಡಜಂಗಮ ಸಮಾವೇಶ. ಆ ಸಮಾವೇಶಕ್ಕೆ ಪಂಚಮಸಾಲಿ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪೀಠಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಯಕ್ರಮ ಸಂಪೂರ್ಣ ವಿಫಲವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.