ADVERTISEMENT

ವೈಜ್ಞಾನಿಕವಾಗಿ ಕಾಮಗಾರಿ ಅನುಷ್ಠಾನಗೊಳಿಸಿ: ರಾಹುಲ್ ರತ್ನಂ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 6:47 IST
Last Updated 29 ಮಾರ್ಚ್ 2024, 6:47 IST
ಮುನಿರಾಬಾದ್ ಸಮೀಪ ಹಿಟ್ನಾಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಬೂದು ನೀರು ನಿರ್ವಹಣಾ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು
ಮುನಿರಾಬಾದ್ ಸಮೀಪ ಹಿಟ್ನಾಳ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಬೂದು ನೀರು ನಿರ್ವಹಣಾ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದರು   

ಮುನಿರಾಬಾದ್: ‘ಹಿಟ್ನಾಳ ಗ್ರಾಮದಲ್ಲಿ ಗುರುತಿಸಲಾದ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಅನುಷ್ಠಾನಗೊಳಿಸಿ’ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.

ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಗ್ರಾಮದಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

‘ಬೂದು ನೀರು ನಿರ್ವಹಣಾ ಕಾಮಗಾರಿ ಅನುಷ್ಠಾನಕ್ಕೆ ಪ್ರತಿ ತಾಲ್ಲೂಕಿಗೆ 2 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ದಿ ಆಯುಕ್ತಾಲಯ ನಿರ್ದೇಶನ ನೀಡಿರುವ ಪ್ರಯುಕ್ತ ತಾಲ್ಲೂಕಿನ ಹಿಟ್ನಾಳ ಮತ್ತು ಹಾಲವರ್ತಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ವೈಜ್ಞಾನಿಕವಾಗಿ ಬೂದು ನೀರನ್ನು ಸಂಸ್ಕರಿಸಿ ಕಾಲುವೆ, ಕೆರೆ, ನಾಲಾಗಳಿಗೆ ಹರಿಸುವಂತೆ ಕ್ರಮವಹಿಸಿ’ ಎಂದು ಸೂಚಿಸಿದರು.

ADVERTISEMENT

ಬೂದು ನೀರು ಹೊರಗಡೆ ಹೋಗಲು ಗುರುತಿಸಲಾದ ಸ್ಥಳಗಳನ್ನು ವೀಕ್ಷಿಸಿದ ಅವರು, ‘ಗ್ರಾಮದಲ್ಲಿ ಬೂದು ನೀರು ಬರುವ ಸ್ಥಳದಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳ ಬೇಕು. 15ನೇ ಹಣಕಾಸು, ಸ್ವಚ್ಛ ಭಾರತ ಮಿಷನ್, ನರೇಗಾ ಯೋಜನೆಗಳ ಅನುದಾನವನ್ನು ಒಗ್ಗೂಡಿಸಿಕೊಂಡು ಅನುಷ್ಠಾನಗೊಳಿಸಬೇಕು. ಗ್ರಾಮದಲ್ಲಿ ಅವಶ್ಯವಿದ್ದಲ್ಲಿ ವೈಯಕ್ತಿಕ ಮತ್ತು ಸಮುದಾಯ ಇಂಗು ಗುಂಡಿ ನಿರ್ಮಿಸಲು ಸ್ಥಳದ ಲಭ್ಯತೆ ನೋಡಿಕೊಂಡು ಅನುಷ್ಠಾನಗೊಳಿಸಿ. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು.ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಿ’ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪ್ರತಿ ಮನೆಗೆ ವಿಧಿಸಲಾಗುತ್ತಿರುವ ಕರ ನಿರ್ಧರಣೆಯನ್ನು ಸಾಮಾನ್ಯ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ಜಾಗೆಗಳಿಗೆ ವಿಧಿಸಿದ ಕರ ವಸೂಲಾತಿಯನ್ನು ಖುದ್ದು ಪರಿಶೀಲಿಸಿದರು.

ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಪಿಒಎಸ್ ಮಷಿನ್ ಮೂಲಕ ಕರ ಪಾವತಿಸುತ್ತಿರುವುದರಿಂದ ನೇರವಾಗಿ ಬಾಪೂಜಿ ಸೇವಾ ಕೇಂದ್ರದ ಖಾತೆಗೆ ಜಮೆಯಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಗಳ ಮಾಹಿತಿ, ಆಸ್ತಿಗಳಿಗೆ ಇಲ್ಲಿಯವರೆಗೆ ವಿತರಿಸಲಾದ ಫಾರಂ ನಂ.9 ಮತ್ತು 11 ಕುರಿತು ರಿಜಿಸ್ಟರ್ ಪರಿಶೀಲಿಸಿದರು. ನಂತರ ಮುನಿರಾಬಾದ ಡ್ಯಾಂ ಮೂನ್ ಲೈಟ್ ಡಾಬಾದ ಹತ್ತಿರ ಇರುವ ಚೆಕ್‌ಪೋಸ್ಟ್ ಗೆ ಭೇಟಿ ನೀಡಿ ತಪಾಸಣಾ ತಂಡದ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸೋಮಶೇಖರ, ತಾಲ್ಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ ಹಲಗೇರಿ, ತಾಂತ್ರಿಕ ಸಹಾಯಕ ರಮೇಶ ಕುಮಾರ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಮಾರುತಿ, ದೊಡ್ಡಬಸವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.