ಕುಕನೂರು: ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ನೀಡಿದ್ದರಿಂದಲೇ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಇವುಗಳನ್ನು ನಕಲು ಮಾಡಿದವರು ಅನುಷ್ಠಾನ ಮಾಡುವಲ್ಲಿ ವಿಫಲರಾದರು’ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದರು.
ತಾಲ್ಲೂಕಿನ ಶಿರೂರು ಪುನರ್ವಸತಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿವಂಗತ ಕೆ.ಎಚ್. ಪಾಟೀಲ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಗ್ಯಾರಂಟಿ ಯೋಜನೆಗಳನ್ನು ನೀಡುವ ಜೊತೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ್ದೇವೆ. ಬಜೆಟ್ ಒಟ್ಟು ಗಾತ್ರವನ್ನೂ ಹೆಚ್ಚಿಸಿದ್ದೇವೆ. ರಾಜ್ಯದ ರಾಜಕಾರಣದಲ್ಲಿ ಕೆ.ಎಚ್. ಪಾಟೀಲ ಅವರದ್ದು ಸದಾ ನೆನಪಿನಲ್ಲಿ ಉಳಿಯುವಂಥ ವ್ಯಕ್ತಿತ್ವ’ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮಾತನಾಡಿ ‘ನಾನು ಮತ್ತು ಭೋಸರಾಜು ಅವರು ಕೆ.ಎಚ್ ಪಾಟೀಲ್ ಅವರ ಜೊತೆಗೆ ಕೆಲಸ ಮಾಡಿದ್ದೆವೆ. ಅವರು ಒಳ್ಳೆಯ ಆಡಳಿತಗಾರರಾಗಿದ್ದರು. ಪಾರದರ್ಶಕ ಆಡಳಿತಕ್ಕೆ ಮಹತ್ವ ನೀಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವದ ಜೊತೆಗೆ ಆಡಳಿತದಲ್ಲಿ ಹಿಡಿತ ಉಳ್ಳವರಾಗಿದ್ದರು. ಕೃಷಿ, ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.
ಪ್ರವಾಸೋದ್ಯಮ ಸಚಿವರೂ ಆದ ಕೆ.ಎಚ್. ಪಾಟೀಲ ಅವರ ಪುತ್ರ ಎಚ್.ಕೆ. ಪಾಟೀಲ ಮಾತನಾಡಿ ‘ಹತ್ತಿ ಮಾರುವುದು ರೈತರಿಗೆ ಬಹುದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಕೆ.ಎಚ್.ಪಾಟೀಲ ಅವರು ಸಹಕಾರಿ ಕ್ಷೇತ್ರದ ಮೂಲಕ ಹತ್ತಿ ಮಿಲ್ ಪ್ರಾರಂಭ ಮಾಡಿದರು. ಸಾಮಾಜಿಕ ನ್ಯಾಯ ಒದಗಿಸಲು ಸಹಕಾರ ಕ್ಷೇತ್ರದ ಮೂಲಕ ಹೋರಾಟ ಮಾಡಿದ್ದಾರೆ’ ಎಂದರು.
‘ವೀರಾಪೂರ, ಮುತ್ತಾಳ, ಮುದ್ಲಾಪುರ, ಶಿರೂರು ಸೇರಿದಂತೆ ಸಾಕಷ್ಟು ಕಡೆ ಅಭಿವೃದ್ಧಿಯಾಗಿದೆ. ಬಸವರಾಜ ರಾಯರಡ್ಡಿಯವರು ಶಾಸಕರಾದ ನಂತರ ಈ ಕ್ಷೇತ್ರದಲ್ಲಿ ಹಲವಾರು ವಸತಿ ನಿಲಯಗಳು, ಶಾಲೆಗಳು, ಆಸ್ಪತ್ರೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಾಗಿವೆ. ಪಂಚ ಗ್ಯಾರಂಟಿ ಯೋಜನೆಗಳಡಿ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ದೊರೆಯುತ್ತಿದೆ. ಇದರಿಂದ ರಾಜ್ಯದಲ್ಲಿ ಬಡತನ ಪ್ರಮಾಣ ಶೂನ್ಯಕ್ಕೆ ಬಂದಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಸಂಸದ ಕೆ.ರಾಜಶೇಖರ ಹಿಟ್ನಾಳ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ನೀರಾವರಿ ಕೇಂದ್ರ ವಲಯ ಮುನಿರಾಬಾದನ ಮುಖ್ಯ ಎಂಜಿನಿಯರ್ ಎಲ್. ಬಸವರಾಜ ಎಂಜಿನಿಯರ್ ಐ.ಪ್ರಕಾಶ, ರಾಘವೇಂದ್ರಚಾರ್ಯ ಜೋಶಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮುಖಂಡರಾದ ಯಂಕಣ್ಣ ಯರಾಶಿ, ಹನಮಂತಗೌಡ ಪಾಟೀಲ್, ಸತ್ಯನಾರಾಯಣ ಹರಪನಹಳ್ಳಿ, ಕುಕನೂರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸಂಗಮೇಶ್ ಗುತ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಜಿ. ಪರಮೇಶ್ವರ್ ಗೃಹ ಸಚಿವ
ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಕೆ.ಎಚ್. ಪಾಟೀಲ ಅವರು ಮಾರ್ಗದರ್ಶಕರಾಗಿದ್ದರು. ರಾಜ್ಯದ ಹಿತದೃಷ್ಟಿಯ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಎನ್.ಎಸ್. ಭೋಸರಾಜು ಸಣ್ಣ ನೀರಾವರಿ ಖಾತೆ ಸಚಿವ
ಜೀವನದಲ್ಲಿ ಯಾವಾಗಲೂ ಸಂಘರ್ಷ ಹಾಗೂ ಸಂಯಮ ಈ ಎರಡು ದಾರಿಗಳು ಇರುತ್ತವೆ. ಕೆ.ಎಚ್. ಪಾಟೀಲ ಅವರು ಸಂಘರ್ಷದ ದಾರಿ ಆಯ್ಕೆ ಮಾಡಿಕೊಂಡರು. ಇಲ್ಲವಾದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರುಜಿ. ಪರಮೇಶ್ವರ್ ಗೃಹ ಸಚಿವ
ಮನದ ಭಾರ ಕಡಿಮೆಯಾಗಿದೆ: ರಾಯರಡ್ಡಿ
ಕುಕನೂರು: ‘ಕೊಪ್ಪಳ ತಾಲ್ಲೂಕಿನ ಹಿರೇಹಳ್ಳ ಜಲಾಶಯ ಭರ್ತಿಯಾದಾಗ ನಾಲ್ಕು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿತ್ತು. ಅನೇಕ ವರ್ಷ ಸಾಕಷ್ಟು ಪ್ರಯತ್ನ ಮಾಡಿ ಪುನರ್ವಸತಿ ಕಲ್ಪಿಸಲಾಗಿದೆ. ಅಂದುಕೊಂಡ ಕೆಲಸ ಮಾಡಿದ್ದಕ್ಕೆ ಖುಷಿಯಾಗಿದೆ. ಮನದ ಭಾರ ಕಡಿಮೆಯಾಗಿದೆ’ ಎಂದು ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಹೇಳಿದರು. ‘ಗ್ರಾಮಗಳನ್ನು ಸ್ಥಳಾಂತರ ಮಾಡುವಂತೆ 2002ರಿಂದಲೇ ಜನರ ಒತ್ತಾಯವಿತ್ತು. ವಿಶೇಷ ಪ್ರಕರಣವೆಂದು ಶೀತ ಪ್ರದೇಶ ಎಂದು ಪರಿಗಣಿಸಿ ಪುನರ್ವಸತಿ ಕಲ್ಪಿಸಲಾಗಿದೆ. ಇದಕ್ಕಾಗಿ ಕೆ.ಎಚ್. ಪಾಟೀಲ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಸಿಮೆಂಟ್ ರಸ್ತೆ ಬಸ್ ನಿಲ್ದಾಣ ಪ್ರೌಢಶಾಲೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪಾಟೀಲ ಅವರ ಹೆಸರು ಸದಾ ನೆನಪಿನಲ್ಲಿ ಉಳಿಯಲಿ ಎನ್ನುವ ಕಾರಣಕ್ಕೆ ಕೆ.ಎಚ್. ಪಾಟೀಲ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.