ಸಾಂಕೇತಿಕ ಚಿತ್ರ (ಸಂಗ್ರಹ ಚಿತ್ರ)
ಕೊಪ್ಪಳ: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆರಂಭಿಕ ಹಂತದಿಂದಲೇ ದೈಹಿಕವಾಗಿ ಸದೃಢರನ್ನಾಗಿ ಮಾಡಲು ಶಾಲಾ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಮೊದಲ ಬಾರಿಗೆ ಶಾಲಾ ಕ್ರೀಡಾಕೂಟಗಳಲ್ಲಿ ಸೈಕ್ಲಿಂಗ್ ಮತ್ತು ಮಲ್ಲಕಂಬ ಕ್ರೀಡೆಗಳನ್ನು ಸೇರ್ಪಡೆ ಮಾಡಿದೆ.
ಇದರಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಅನೇಕ ವರ್ಷಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ. ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ ಸೇರಿದಂತೆ ಅನೇಕ ಕಡೆ ಸೈಕ್ಲಿಂಗ್ ಹಾಗೂ ಮಲ್ಲಕಂಬದಲ್ಲಿ ಸಾಕಷ್ಟು ಅನುಭವ ಹೊಂದಿದ ಮತ್ತು ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಇದ್ದಾರೆ. ಇಷ್ಟು ವರ್ಷಗಳ ಕಾಲ ಶಾಲಾ ಕ್ರೀಡಾಕೂಟದಲ್ಲಿ ಅವಕಾಶ ಸಿಗದ ಕಾರಣ ಪ್ರತಿಭೆಯಿದ್ದರೂ ತೋರಿಸಲು ಅವಕಾಶವಿರಲಿಲ್ಲ. ಪದವಿಪೂರ್ವ ಹಂತಕ್ಕೆ ಹೋದಾಗ ಮಾತ್ರ ಸ್ಪರ್ಧೆ ಮಾಡಬೇಕಾಗಿತ್ತು.
ಆದ್ದರಿಂದ ರಾಜ್ಯ ಸೈಕ್ಲಿಂಗ್ ಸಂಸ್ಥೆ ಈ ಕ್ರೀಡೆಗೆ ಶಾಲಾ ಕ್ರೀಡಾಕೂಟದಲ್ಲಿಯೂ ಅವಕಾಶ ಕೊಡಬೇಕು ಎಂದು ಒತ್ತಾಯಿಸುತ್ತಲೇ ಬಂದಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳ ಸಭೆಯಲ್ಲಿ ಈ ಎರಡೂ ಕ್ರೀಡೆಗಳ ಕುರಿತು ವ್ಯಾಪಕ ಚರ್ಚೆ ನಡೆಸಿ ಅನುಮೋದನೆ ನೀಡಲಾಗಿದೆ.
ಸೈಕ್ಲಿಂಗ್ ಕ್ರೀಡೆಯಲ್ಲಿ 14 ಹಾಗೂ 17 ವರ್ಷದ ಒಳಗಿನವರ ವಿಭಾಗಕ್ಕೆ ಅವಕಾಶ ಕೊಡಲಾಗಿದ್ದು, ಟೈಮ್ ಟ್ರಯಲ್‌ನಲ್ಲಿ ಇನ್ನು ಮುಂದೆ ನೇರವಾಗಿ ಜಿಲ್ಲಾಮಟ್ಟದ ಕ್ರೀಡಾಕೂಟದಿಂದಲೇ ಬಾಲಕರಿಗೆ 10 ಕಿ.ಮೀ., ಬಾಲಕಿಯರಿಗೆ 5 ಕಿ.ಮೀ. ಸ್ಪರ್ಧೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ರಾಜ್ಯಮಟ್ಟದ ಶಾಲಾ ಟೂರ್ನಿಗೆ ಜಿಲ್ಲಾ ತಂಡವನ್ನು ಆಯ್ಕೆ ಮಾಡಲು 500 ಮೀಟರ್ ಹಾಗೂ ಒಂದು ಕಿ.ಮೀ. ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ವೈಯಕ್ತಿಕ ಟೈಮ್ ಟ್ರಯಲ್, ಮಾಸ್ಡ್ ಸ್ಟಾರ್ಟ್ ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ.
ಸಾಹಸ ಕ್ರೀಡೆ ಮಲ್ಲಕಂಬ 14 ಹಾಗೂ 17 ವರ್ಷದ ಒಳಗಿನವರ ವಿಭಾಗಕ್ಕೆ ನಡೆಸಲಾಗುತ್ತದೆ. ಜಿಲ್ಲಾಮಟ್ಟದಿಂದಲೇ ನೇರವಾಗಿ ಈ ಕ್ರೀಡೆಗಳ ಆಯ್ಕೆ ಜರುಗಲಿದ್ದು, ಬಾಲಕರಿಗೆ ಪೋಲೊ ಮಲ್ಲಕಂಬ ಮತ್ತು ಬಾಲಕಿಯರಿಗೆ 10 ಅಂಕಗಳ ಆಧಾರ ಹಾಗೂ 90 ಸೆಕೆಂಡ್‌ಗಳ ಕಾಲಾವಧಿಯಲ್ಲಿ ರೋಪ್ ಮಲ್ಲಕಂಬ ಸ್ಪರ್ಧೆ ನಡೆಸಲು ಇಲಾಖೆ ನಿರ್ಧರಿಸಿದೆ.
‘ಶಾಲಾ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಕ್ರೀಡೆಯನ್ನು ಈಗಾಗಲೇ ಅನೇಕ ರಾಜ್ಯಗಳು ಅಳವಡಿಸಿಕೊಂಡಿದ್ದು 12 ವರ್ಷಗಳಿಂದ ರಾಷ್ಟ್ರೀಯ ಮಟ್ಟದ ಶಾಲಾ ಟೂರ್ನಿ ನಡೆಯುತ್ತಿದೆ. ಪಿಯುಸಿ ಹಂತದ ಟೂರ್ನಿಗಳಲ್ಲಿ ರಾಜ್ಯದ ಸೈಕ್ಲಿಸ್ಟ್‌ಗಳು ಸಾಕಷ್ಟು ಪದಕಗಳನ್ನು ಜಯಿಸಿದ್ದಾರೆ. ರಾಜ್ಯದವರು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಈಗ ಶಾಲಾ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಸೇರ್ಪಡೆ ಮಾಡಿದ್ದರಿಂದ ರಾಜ್ಯದಲ್ಲಿ ಈ ಕ್ರೀಡೆ ಮತ್ತಷ್ಟು ಪ್ರಗತಿ ಕಂಡು ದೇಶದ ಸೈಕ್ಲಿಂಗ್ ಶಕ್ತಿಯಾಗಿ ರಾಜ್ಯ ಬೆಳೆಯುತ್ತದೆ’ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ಭರವಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.