ಗಂಗಾವತಿ: ಭಾರತ ಭವ್ಯ ಇತಿಹಾಸ, ಪರಂಪರೆಯ ನಾಡಾಗಿದ್ದು, ಇಲ್ಲಿ ಹಲವು ರಾಜ್ಯ, ಸಾಮ್ರಾಜ್ಯಗಳು ಉದಯಿಸಿ, ಆಡಳಿತ ನಡೆಸಿ, ರಾಜಕೀಯ, ಸಾಂಸ್ಕೃತಿಕ ಹಿರಿಮೆ ಎತ್ತಿ ಹಿಡಿದಿವೆ ಎಂದು ಸಾಹಿತಿ ಲಿಂಗಾರೆಡ್ಡಿ ಆಲೂರು ಅಭಿಪ್ರಾಯಪಟ್ಟರು.
ನಗರದ ಕೆ.ಎಸ್.ಸಿ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ 2024- 25ರ ಸಾಲಿನ ವಿಶೇಷ ವಾರ್ಷಿಕ ಶಿಬಿರದ 4ನೇ ದಿನದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ತುಂಬ ರಾಜರು ಸಾವಿರಾರು ಕೋಟೆ, ಕೊತ್ತಲ, ದೇವಾಲಯ, ಬಸದಿ, ಸ್ತೂಪ, ಮಂದಿರ,ಮಸೀದಿ, ಬಾವಿ, ಪುಷ್ಕರಣಿ, ಕೆರೆ, ಕಟ್ಟೆ ಮುಂತಾದ ಸ್ಮಾರಕಗಳನ್ನು ನಿರ್ಮಿಸಿ, ಇತಿಹಾಸ ಕಟ್ಟಿಕೊಟ್ಟಿದ್ದಾರೆ. ಸ್ಮಾರಕಗಳು ಕೇವಲ ಭೌತಿಕ ಕಟ್ಟಡಗಳಲ್ಲ, ಅವು ನಮ್ಮ ಇತಿಹಾಸ, ಪರಂಪರೆಯ ಪ್ರತೀಕಗಳು ಎಂದರು
ಹಾಗಾಗಿ ಸ್ಮಾರಕಗಳ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ನಮ್ಮ ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅನೇಕ ಸ್ಮಾರಕಗಳಿದ್ದು, ಸ್ಥಳೀಯರ ತಪ್ಪು ತಿಳಿವಳಿಕೆಯಿಂದ ವಿನಾಶದ ಹಂತಕ್ಕೆ ತಲುಪಿವೆ ಎಂದರು.
ಪ್ರಾಚಾರ್ಯ ಶರಣಬಸಪ್ಪ ಕೋಲ್ಕಾರ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಗ್ರಾಮಗಳಲ್ಲಿರುವ ಶಾಸನ, ಶಿಲ್ಪ ಮೂರ್ತಿ, ದೇವಾಲಯ, ಕೋಟೆ, ಲಾಡೋಲೆ, ಪ್ರಾಚೀನ ನಾಣ್ಯ ಮುಂತಾದವುಗಳ ಬಗ್ಗೆ ದಾಖಲೆ ಮಾಡಿ ಸಣ್ಣ, ಸಣ್ಣ ಲೇಖನಗಳನ್ನು ಬರೆಯುವಂತೆ ಸಲಹೆ ನೀಡಿದರು.
ನಂತರ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದೊಂದಿಗೆ ಹೊರತಂದ ಸ್ಮಾರಕಗಳ ಸಂರಕ್ಷಣೆಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಉಪನ್ಯಾಸಕಿ ಶಾರದಾ ಪಾಟೀಲ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದ ಸ್ವರೂಪ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವಾಣಿಶ್ರೀ ಪಾಟೀಲ, ಸುರೇಶ ಗೌಡ ಸೇರಿ ಮಹಾವಿದ್ಯಾಲಯದ ಸಿಬ್ಬಂದಿ, ಎನ್ಎಸ್‌ಎಸ್, ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.