ADVERTISEMENT

ಕಾರಟಗಿ: ಕೀಟ, ರೋಗಬಾಧೆ ಕುರಿತು ರೈತರಿಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:50 IST
Last Updated 20 ಜುಲೈ 2025, 6:50 IST
ಕಾರಟಗಿ ಸಮೀಪದ ಯರಡೋಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರು ನಾಟಿ ಮಾಡಿರುವ ಸಸಿ ಮಡಿಗಳ ಸ್ಥಳಕ್ಕೆ ಭೇಟಿ ನೀಡಿ, ಮುಂಜಾಗರೂಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರಟಗಿ ಸಮೀಪದ ಯರಡೋಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರು ನಾಟಿ ಮಾಡಿರುವ ಸಸಿ ಮಡಿಗಳ ಸ್ಥಳಕ್ಕೆ ಭೇಟಿ ನೀಡಿ, ಮುಂಜಾಗರೂಕ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.   

ಕಾರಟಗಿ: ಮುಂಗಾರು ಹಂಗಾಮಿನ ಭತ್ತದ ನಾಟಿ ಕಾರ್ಯಕ್ಕೆ ರೈತರು ಸಿದ್ಧರಾಗಿದ್ದಾರೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ರೈತರಿಗೆ ಭತ್ತದಲ್ಲಿ ಕಂಡುಬರುವ ಪ್ರಮುಖ ಕೀಟ ಮತ್ತು ರೋಗಬಾಧೆ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.

ನ್ಯಾನೊ ಯುರಿಯಾ ರಸಗೊಬ್ಬರ ಮತ್ತು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಕೆಯ ಬಗ್ಗೆ ಕೃಷಿ ಸಂಜೀವಿನಿ ವಾಹನದ ಮೂಲಕ ರೈತರಿಗೆ ತಿಳಿವಳಿಕೆ ನೀಡಲಾಯಿತು.

ಶುಕ್ರವಾರ ಕಾರಟಗಿ ಹೊಬಳಿಯ ಬೂದುಗುಂಪಾ, ಯರಡೋಣ, ಮೈಲಾಪುರ, ಬೇವಿನಾಳ, ಚಳ್ಳೂರು, ಹುಳ್ಕಿಹಾಳ, ಮರ್ಲಾನಹಳ್ಳಿ ಸಹಿತ ವಿವಿಧ ಗ್ರಾಮಗಳಲ್ಲಿ ಸಂಚರಿಸಿ, ರೈತರಿಗೆ ಮಾಹಿತಿ ರವಾನಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ADVERTISEMENT

ಕಣೆ ನೊಣದ ನಿರ್ವಹಣೆ ಕುರಿತು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ರಾಘವೇಂದ್ರ ಎಲೆಗಾರ ಮಾತನಾಡಿ, ‘ಭತ್ತ ನಾಟಿ ಮೊದಲು ನಂತರ ಅನುಸರಿಸಬೇಕಾದ ಕ್ರಮಗಳು, ಕೀಟನಾಶಕ ಬಳಕೆಯ ಬಗ್ಗೆ ಮಾಹಿತಿ ನೀಡಿ, ಸಮಸ್ಯೆ ಎದುರಾದರೆ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಕೃಷಿ ಅಧಿಕಾರಿ ನಾಗರಾಜ ಮಾತನಾಡಿ, ‘ನ್ಯಾನೊ ಯುರಿಯಾ ಮಹತ್ವ ಮತ್ತು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ರಸಗೊಬ್ಬರ ಬಳಕೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನ್ಯಾನೊ ಯುರಿಯಾ ಒಂದು ದ್ರವರೂಪದ ರಸಗೊಬ್ಬರವಾಗಿದೆ. ಇದು ಸಂಪ್ರಾದಾಯಿಕ ಯೂರಿಯಾ ಗೊಬ್ಬರಕ್ಕಿಂತ 8ರಿಂದ 10 ಪಟ್ಟು ಪರಿಣಾಮಕಾರಿಯಾಗಿದೆ. ಬೆಳೆಗಳಿಗೆ ತ್ವರಿತವಾಗಿ ಪೋಷಕಾಂಶ ನೀಡುತ್ತದೆ. ನ್ಯಾನೊ ಯುರಿಯಾ ಬಳಸಿದರೆ ಸಂಪ್ರಾದಾಯಿಕ ರಸಗೊಬ್ಬರದ ಪ್ರಮಾನವನ್ನು ಶೇ 50ರಷ್ಟು ಕಡಿಮೆ ಮಾಡಬಹುದು. ಸಸ್ಯಗಳ ಬೆಳೆವಣಿಗೆಗೆ ಮತ್ತು ಅಭಿವೃದ್ಧಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ. ರೈತರು ಕೆಲ ಪೋಷಕಾಂಶಗಳ ಗೊಬ್ಬರ ಉಪಯೋಗಿಸುತ್ತಿದ್ದಾರೆ. ಅದರೊಂದಿಗೆ ವಿವಿಧ ಪೋಷಕಾಂಶಯುಳ್ಳ ಗೊಬ್ಬರ ಸಲಹೆ ಪಡೆದು ಉಪಯೋಗೊಸಬೇಕು’ ಎಂದು ಹೇಳಿದರು.

ಆತ್ಮ ಸಿಬ್ಬಂದಿ ದೀಪಾ, ಕೃಷಿ ಸಂಜೀವಿನಿ ಸಿಬ್ಬಂದಿ ಮುರುಡಪ್ಪ ಹಾಗೂ ರೈತರು ಉಪಸ್ಥಿತರಿದ್ದರು.

‘ಮಾಹಿತಿ ಪಡೆದು ರಸಗೊಬ್ಬರ ಬಳಸಿ ವಿಮೆ ಮಾಡಿಸಿ’:

‘ರೈತರು ಭತ್ತದ ಬೆಳೆಯ ನಾಟಿಗೆ ಸಿದ್ಧವಾಗಿದ್ದಾರೆ. ನಾಟಿ ಪೂರ್ವ ಮತ್ತು ಬಳಿಕ ಅನುಸರಿಸಬೇಕಾದ ಕ್ರಮಗಳನ್ನು ಕೈಗೊಂಡು ಬೆಳೆ ಸಮೃದ್ಧವಾಗಿ ಬರುವಂತೆ ಅಗತ್ಯ ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಹೇಳಿದ್ದಾರೆ. ಬೆಳೆ ವಿಮೆಗೆ ರೈತರು ಮುಂದಾಗಬೇಕು’ ಎಂದು ತಹಶೀಲ್ದಾರ್‌ ಎಂ.ಕುಮಾರಸ್ವಾಮಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ. ಜುಲೈ 31ರೊಳಗೆ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ಮಾಡಿಸಬೇಕು. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರು ಅದರ ಸದುಪಯೋಗಕ್ಕೆ ಮುಂದಾಗಬೇಕು. ಮಾಹಿತಿಗಾಗಿ ಪವನಕುಮಾರ 9742161333 ಫಕೀರ್‌ ಸಾಬ 9164098169 ಅಥವಾ ಕರಿಯಪ್ಪ 9742603654ಗೆ ಸಂಪರ್ಕಿಸಬಹುದು’ ಎಂದು ಅವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.